ಗ್ರಂಥಾಲಯ ಕಟ್ಟಡ ಶೀಘ್ರ ಸಮರ್ಪಣೆ
ಹಾನಗಲ್ಲ: ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಸಾರ್ವಜನಿಕ ಗ್ರಂಥಾಲಯದ ಸುಸಜ್ಜಿತ ಕಟ್ಟಡವನ್ನು ಶೀಘ್ರದಲ್ಲಿ ಜನತೆಯ ಸೇವೆಗೆ ಸಮರ್ಪಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ.ವೈ. ಬಂಡಿವಡ್ಡರ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಕಟ್ಟಡಕ್ಕಾಗಿ ರು. 1.50 ಲಕ್ಷ ಮಂಜೂರಿ ಮಾಡಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಗುತ್ತಿಗೆದಾರರ ಸಮಸ್ಯೆಯಿಂದಾಗಿ ಅದು ಲೋಕಾರ್ಪಣೆಗೊಂಡಿಲ್ಲ. ಈಗ ಸಮಸ್ಯೆ ಪರಿಹರಿಸಲಾಗಿದ್ದು, ಗ್ರಂಥಾಲಯದ ಸೇವೆ ಓದುಗರಿಗೆ ದೊರೆಯಲಿದೆ ಎಂದು ವಿವರಿಸಿದರು.
ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕಲ್ಯಾಣಕುಮಾರ ಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ (ಪ್ರಭಾರಿ) ಬಿ.ಕೆ. ಹೊಸಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ರವಿರಾಜ ಕಲಾಲ, ಪ್ರಾಚಾರ್ಯ ಎನ್.ಬಿ. ಬಣಕಾರ, ವಿ.ಜಿ. ಶಾಂತಪುರಮಠ ಮಾತನಾಡಿದರು. ಗ್ರಂಥಾಲಯ ಸಹಾಯಕಿ ಎಫ್.ಎಚ್. ವಡ್ಡರ, ಶಿಕ್ಷಕ ವಿ.ಬಿ. ಪವಾರ, ಕೆ.ಎಚ್. ಮುನಿಯಣ್ಣನವರ್, ಎಚ್.ಬಿ. ಕುಲಕರ್ಣಿ, ಸಿಬ್ಬಂದಿ ಪ್ರಕಾಶ ಕುಲಕರ್ಣಿ, ಆರ್.ಎಂ. ಮೇಗಳಮನಿ ಇದ್ದರು. ಸಪ್ತಾಹದ ಅಂಗವಾಗಿ ಉತ್ತಮ ಓದುಗರಾದ ಎ.ಎಂ. ದೊಡ್ಡಮನಿ ಹಾಗೂ ಎಂ.ಬಿ. ಬನ್ನೂರ ಅವರನ್ನು ಸನ್ಮಾನಿಸಲಾಯಿತು. ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.