ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದುಡಿದು ಉಣ್ಣುವ ಸಂಸ್ಕೃತಿ ಬೆಳೆಸಿ: ಸಾಣೇಹಳ್ಳಿ ಶ್ರೀ

Lingaraj Badiger
Updated On : 28 Nov 2013, 11:04 am

ಹಾನಗಲ್ಲ: ರಂಗಭೂಮಿ ಜನರ ಮನಸ್ಸನ್ನು ಅರಳಿಸಿ ಸಾಂಸ್ಕೃತಿಕ ಸಂಪತ್ತನ್ನು ವೃದ್ಧಿಗೊಳಿಸುವ ಶಕ್ತಿ ಹೊಂದಿದ್ದು, ಸರ್ಕಾರಗಳು ಜನರನ್ನು ದರಿದ್ರರನ್ನಾಗಿಸುವ ಯೋಜನೆಗಳನ್ನು ಕೈಬಿಟ್ಟು ದುಡಿದು ದಣಿದು ಉಣ್ಣುವ ಸಂಸ್ಕೃತಿ ಬೆಳೆಸಲಿ ಎಂದು ಸಾಣೇಹಳ್ಳಿ ಡಾ೤ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಹಾನಗಲ್ಲಿನಲ್ಲಿ ಕುಮಾರೇಶ್ವರ ಸೇವಾ ಸಮಿತಿ ಕುಮಾರೇಶ್ವರ ಬಯಲು ರಂಗ ಮಂದಿರಲ್ಲಿ ಆಯೋಜಿಸಿದ ಸಾಣೇಹಳ್ಳಿಯ ಶಿವಸಂಚಾರ ಕಲಾ ತಂಡದ ಮೂರು ದಿನಗಳ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರಿಗೆ ಸಂತೋಷವನ್ನುಂಟು ಮಾಡುವ, ಹೃದಯ ಅರಳಿಸುವ ನಾಟಕ ಪರಂಪರೆ, ರಂಗ ಕ್ಷೇತ್ರಕ್ಕೆ ಸರ್ಕಾರಗಳು ಹಣ ವಿನಿಯೋಗಿಸಬೇಕು. ಜನರನ್ನು ದರಿದ್ರರನ್ನಾಗಿಸುವ ಭಾಗ್ಯ, ಅಕ್ಕಿ ಯೋಜನೆಗಳನ್ನು ಕೈಬಿಡಬೇಕು. ಜನರನ್ನು ಸೋಮಾರಿಗಳನ್ನಾಗಿಸಿ ಮನಸ್ಸಿನ ದೌರ್ಬಲ್ಯದ ದುರುಪಯೋಗ ಮಾಡಿಕೊಳ್ಳಬೇಡಿ. ಜನರ ಆತ್ಮಬಲ ಹೆಚ್ಚಿಸಿ. ಜನರಿಗೆ ದುಡಿಮೆ ಮಾರ್ಗ ತೋರಿಸಿ, ಕಾಯಕವೇ ಕೈಲಾಸ ನೆನಪಿಸಿಕೊಳ್ಳಿ ಎಂದು ಚಾಟಿ ಬೀಸಿದರು.
ಜನಪರವಾಗಿ, ಜನಪ್ರಿಯತೆ ಬೇಡ: ಜನಪ್ರತಿನಿಧಿಗಳು, ಅಧಿಕಾರಿಗಳು ಜನಪರವಾಗಬೇಕೇ ಹೊರತು ಜನಪ್ರಿಯತೆಗಾಗಿ ಹಾತೊರೆಯುವುದು ಬೇಡ. ಇತ್ತೀಚೆಗೆ ನಿಷ್ಠಾವಂತರ ಮೇಲೆಯೇ ಗದಾಪ್ರಹಾರವಾಗುತ್ತಿದೆ. ಲೋಕವಿರೋಧಿ ಚಟುವಟಿಕೆಗೆ ಹೆಚ್ಚು ಆಸ್ಪದವಾಗುತ್ತಿದೆ. ಸಮಾಜಮುಖಿ ಚಿಂತನೆಗೆ ಒತ್ತು ಕೊಡಿ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ದಾರಾಜಯೋಗೀಂದ್ರ ಸ್ವಾಮೀಜಿ, ಥೇಟರ್‌ಗಳಿಗೆ ಸೀಮಿತವಾದ ರಂಗ ಪ್ರದರ್ಶನಗಳು ಈಗ ಬಯಲು ರಂಗಭೂಮಿ ಮೂಲಕ ಹೆಚ್ಚು ಪ್ರಚಲಿತವಾಗುತ್ತಿವೆ. ಸಾಣೇಹಳ್ಳಿ ಮಾದರಿಯಲ್ಲೇ ಹಾನಗಲ್ಲಿನಲ್ಲಿ ನಿರ್ಮಾಣವಾದ ಬಯಲು ರಂಗ ಮಂದಿರ ಸಾಂಸ್ಕೃತಿಕ ವಾತಾವರಣ ನಿರ್ಮಿಸುತ್ತಿದೆ. ಸಾಣೇಹಳ್ಳಿ ಶಿವಸಂಚಾರ ನಾಟಕ ಪ್ರದರ್ಶನಗಳು ದೇಶವ್ಯಾಪಿಯಾಗಿ ಹೆಸರು ಮಾಡಿವೆ. ಈಗ ಕಲೆಯನ್ನು ಜೀವಂತವಾಗಿರಿಸುವ ಮೂಲಕ ಸಂಸ್ಕೃತಿ ಪುನರುತ್ಥಾನಗೊಳಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಸಿ.ಎಂ. ಉದಾಸಿ, ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳವರು ಈ ನಾಡಿನ ಶಕ್ತಿಯಾಗಿ ದುರ್ಬಲರಿಗೆ ಬದುಕುವ ಮಾರ್ಗ ತೋರಿದ ಮಹಾಗುರು. ಬದುಕು ಎಂದರೇನೆಂದು ತೋರಿದವರು. ಇಲ್ಲಿ ಸಾಂಸ್ಕೃತಿಕ ಕೇಂದ್ರವಾಗಿರುವ ಈ ಬಯಲು ರಂಗಮಂದಿರ ವೈಚಾರಿಕವಾದ ಚಿಂತನೆಗಳ ವೇದಿಕೆಯೂ ಆಗಿ ಸದುಪಯೋಗ ಆಗಲಿ ಎಂದರು.
ಬಿಜಕಲ್ ಶಿವಲಿಂಗ ಸ್ವಾಮೀಜಿ, ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್. ಬಳ್ಳಾರಿ, ಎಪಿಎಂಸಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಸಾಹಿತಿ ಮಾರುತಿ ಶಿಡ್ಲಾಪುರ, ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್ ನಿರ್ದೇಶಕರಾದ ಎನ್.ಜಿ. ಕುಂಬಾರಿ, ಜಿ.ಎಸ್. ಕೊಂಡೋಜಿ, ಎಸ್.ಎಚ್. ಕೋಟಿ ಇದ್ದರು. ತಹಸೀಲ್ದಾರ ಎಸ್.ಎನ್. ರುದ್ರೇಶ ಪ್ರಾಸ್ತಾವಿಕ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿ ಬಿ.ವೈ. ಬಂಡಿವಡ್ಡರ ಸ್ವಾಗತಿಸಿದರು. ಉಪನ್ಯಾಸಕ ಆರ್.ವಿ. ಮಾಡಳ್ಳಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement