ಬ್ಯಾಡಗಿ: ಡಿಸೆಂಬರ್ ಕೊನೆಗೆ ಕೃಷಿ ಉತ್ಸವ
ಬ್ಯಾಡಗಿ: ಕೃಷಿ ಪ್ರಧಾನ ಭಾರತದಲ್ಲಿ ಕೃಷಿಕರನ್ನೇ ಮುಖ್ಯವಾಹಿನಿಗೆ ತರಲು ಹರಸಾಹಸ ಪಡಬೇಕಾಗಿದೆ ಈ ಹಿನ್ನೆಲೆಯಲ್ಲಿ ಕೃಷಿ ಮೇಳಗಳು ಉತ್ಸವಗಳು ಹೆಚ್ಚು ಆಯೋಜನೆಗೊಳ್ಳಬೇಕಿದೆ ಎಂದು ಮಾಜಿ ಶಾಸಕ ಸುರೇಶಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಡಿಸೆಂಬರ್ ಕೊನೆಯ ವಾರದಲ್ಲಿ ಪಟ್ಟಣದಲ್ಲಿ ನಡೆಯಲಿರುವ ಕೃಷಿ ಉತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಮುಪ್ಪಿನೇಶ್ವರ ಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಸಮಾಲೋಚನಾ ಸಭೆ ಉದ್ಘಾಟಿಸಿದ ಅವರು, ಕೃಷಿ ಚಟುವಟಿಕೆ ಸ್ಥಗಿತಗೊಂಡರೆ ದೇಶದ ಪ್ರಗತಿ ಸ್ತಬ್ಧವಾಗುತ್ತದೆ. ಕೃಷಿ ಅಭಿವೃದ್ಧಿಗೆ ಪೂರಕವಾದ ಆವಿಷ್ಕಾರಗಳನ್ನು ಪ್ರೋತ್ಸಾಹಿಸಬೇಕು ಎಂದರು.
ತಾಂತ್ರಿಕತೆ ಬೆಳೆಯಲಿ: ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ವೈಫಲ್ಯದಿಂದ ಕೃಷಿಕ ಮುಕ್ತನಾಗಬೇಕಿದೆ. ಮಳೆಯಾಶ್ರಿತ ಕೃಷಿಭೂಮಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಬೇಕು. ಕೃಷಿ ಉತ್ಸವಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕಿರಣ ನಡೆಸುವ ಮೂಲಕ ಸರ್ಕಾರ ಹಾಗೂ ರೈತರಿಗೆ ತಂತ್ರಜ್ಞಾನ ವರ್ಗಾವಣೆಯಾಗಬೇಕೆಂದರು.
ಮುರಿಗೆಪ್ಪ ಶೆಟ್ಟರ ಮಾತನಾಡಿ, ಉತ್ಸವದಲ್ಲಿ 3 ಸಾವಿರಕ್ಕೂ ಹೆಚ್ಚು ರೈತರು ಸೇರಲಿದ್ದು, ಇತ್ತೀಚೆಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಕೃಷಿಗೆ ಪೂರಕವಾಗಿ ಬೆಳೆಯುತ್ತಿದ್ದು, ಕೃಷಿ ಮೇಲಿನ ವೆಚ್ಚಗಳನ್ನು ನಿಭಾಯಿಸುತ್ತಿವೆ. ಇವುಗಳ ಬಗ್ಗೆಯೂ ಕೃಷಿ ಉತ್ಸವದಲ್ಲಿ ಪ್ರಚಾರ ಆಗಲಿ ಎಂದರು.
ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ಕೃಷಿ ಉತ್ಸವದ ಯಶಸ್ಸಿಗಾಗಿ ಸರ್ಕಾರಿ ಸ್ವಾಮಿತ್ವದ ತೋಟಗಾರಿಕೆ ಜಲಾನಯನ ಹಾಗೂ ಕೃಷಿ ಇಲಾಖೆಗಳ ಸಹಭಾಗಿತ್ವ ಪಡೆಯಲು ಚಿಂತನೆ ನಡೆಸಿದ್ದು, ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
8 ಗೋಷ್ಠಿಗಳು: ಕೃಷಿ ಪಂಡಿತ ಚನ್ನಬಸಪ್ಪ ಕೊಂಬಳಿ ಮಾತನಾಡಿ, ಎರಡು ದಿನಗಳ ಉತ್ಸವದಲ್ಲಿ ಕೃಷಿ ಪಂಡಿತರು, ಚಿಂತಕರು ಹಾಗೂ ಸಾಧಕರನ್ನು ಆಹ್ವಾನಿಸಿ, ದಿನಕ್ಕೆ 4ರಂತೆ 8 ವಿಚಾರ ಗೋಷ್ಠಿಗಳು, ಜಾನುವಾರು ಪ್ರದರ್ಶನ ಆಯೋಜಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನಾಧಿಕಾರಿ ಗಣೇಶ ಮರಾಠೆ, ಉತ್ಸವದಲ್ಲಿ ಬೀಜ, ಗೊಬ್ಬರ ಮುಂತಾದ ಮಾರಾಟ ಮಳಿಗೆಗಳಿಗೆ ಅವಕಾಶವಿದೆ. ಅವಶ್ಯವಿದ್ದ ರೈತರು ಸ್ಥಳದಲ್ಲೇ ಖರೀದಿಸಲು ಅನುಕೂಲವಾಗಲಿದೆ ಎಂದರು.
ಯೋಜನೆಯ ವಸಂತ ಸಾಲಿಯಾನ, ಎಪಿಎಂಸಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ, ಪುರಸಭೆ ಸದಸ್ಯರಾದ ನಾರಾಯಣಪ್ಪ ಕರ್ನೂಲ, ಪ್ರಶಾಂತ್ ಯಾದವಾಡ, ಕೃಷಿಕರಾದ ಶಿವಪ್ಪ ಬಣಕಾರ, ಹನುಮಂತಪ್ಪ ಮಾಗೋಡ, ಈರಪ್ಪ ಸಂಕಣ್ಣನವರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಚ್. ನಟರಾಜ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಚಿದಾನಂದ, ವೀರಭದ್ರಗೌಡ ಹೊಮ್ಮರಡಿ ಇದ್ದರು. ಕೆ. ನಾರಾಯಣ ಸ್ವಾಗತಿಸಿದರು. ಮುತ್ತಕ್ಕ ನಿರೂಪಿಸಿದರು. ಸುಜಾತಾ ಚನ್ನಗೌಡ್ರ ವಂದಿಸಿದರು.