ಯಾಲಕ್ಕಿ ಕಂಪಿನ ಊರಲ್ಲಿ ಕ್ರೀಡಾ ಕಲರವ
ಕನ್ನಡಪ್ರಭ ವಾರ್ತೆ, ಹಾವೇರಿ, ನ. 27
ನಗರದಲ್ಲಿ ಈಗ ಎಲ್ಲಿ ನೋಡಿದರೂ ಟ್ರ್ಯಾಕ್ ಶೂಟ್ ಧರಿಸಿದ ಬಾಲಕಿಯರು, ಯುವತಿಯರ ಗುಂಪು ಕಾಣುತ್ತಿದೆ. ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಹಾಗೂ ಬೇರೆ ಬೇರೆ ಭಾಷೆ ಮಾತನಾಡುವ 16ರಿಂದ 25ರ ವಯೋವಾನದ ಕ್ರೀಟಾಪಟುಗಳು ಒಂದೆಡೆ ಕಲೆತಿದ್ದಾರೆ. ಯಾಲಕ್ಕಿ ಕಂಪಿನ ನಗರದಲ್ಲಿ ಕ್ರೀಡಾಪಟುಗಳ ಕಲರವ ಕಂಡುಬರುತ್ತಿದೆ.
ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರದಿಂದ ಆರಂಭವಾಗಿರುವ 39ನೇ ರಾಷ್ಟ್ರೀಯ ಮಹಿಳಾ ಪೈಕಾ ಕ್ರೀಡಾಕೂಟದಲ್ಲಿ ಕಬಡ್ಡಿ, ಖೋಖೋ ಹಾಗೂ ವಾಲಿಬಾಲ್ ಪಂದ್ಯಗಳು ನಡೆಯಲಿವೆ. 4 ದಿನಗಳ ಕಾಲ ಈ ಪಂದ್ಯಾವಳಿ ವ್ಯವಸ್ಥಿತವಾಗಿ ನಡೆದು ಜಿಲ್ಲೆಯ ಪ್ರತಿಷ್ಠೆ ಹೆಚ್ಚುವಂತೆ ಮಾಡುವುದು ಅಧಿಕಾರಿಗಳು, ಸಾರ್ವಜನಿಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ಎಲ್ಲರೂ ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದು, ನಾಕೌಟ್ ಹಾಗೂ ಲೀಗ್ ಮಾದರಿಯಲ್ಲಿ ನಡೆಯುವ ಪಂದ್ಯಗಳು ಮಹತ್ವ ಪಡೆದುಕೊಂಡಿವೆ.
ಕ್ರೀಡಾ ಸಾಧಕರು
ಕರ್ನಾಟಕ ಸೇರಿದಂತೆ ಜಮ್ಮು ಕಾಶ್ಮೀರ, ಜಾರ್ಖಂಡ್, ಪಶ್ಚಿಮ ಬಂಗಾಳ, ದೆಹಲಿ, ಗುಜರಾತ್, ಬಿಹಾರ, ಹಿಮಾಚಲ ಪ್ರದೇಶ, ಒಡಿಶಾ, ಗೋವಾ, ಹರಿಯಾಣ, ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ, ಆಂಧ್ರ, ತಮಿಳುನಾಡು, ಪಂಜಾಬ್ ಮುಂತಾದ ರಾಜ್ಯಗಳಿಂದ ಸಾವಿರಾರು ಕ್ರೀಡಾ ಸಾಧಕರು ಹಾವೇರಿ ನಗರದಲ್ಲಿ ಸಾಧನೆ ಮೆರೆಯಲು ಆಗಮಿಸಿದ್ದಾರೆ. ತಮ್ಮ ರಾಜ್ಯದಲ್ಲಿ ವಿಶೇಷ ಸಾಧನೆ ಮಾಡಿರುವ ಅವರು ರಾಷ್ಟ್ರಮಟ್ಟದ ಈ ಕ್ರೀಡಾಕೂಟದಲ್ಲಿ ಸಂತಸದಿಂದಲೇ ಭಾಗಿಯಾಗಿದ್ದಾರೆ. ಎರಡು ಮೂರು ದಿನಗಳಿಂದ ಪ್ರವಾಸ ಮಾಡಿ ದೂರದ ರಾಜ್ಯಗಳಿಂದ ಮಂಗಳವಾರ ರಾತ್ರಿಯೇ ಕೆಲ ತಂಡಗಳು ಇಲ್ಲಿಗೆ ಬಂದಿದ್ದು, ಬುಧವಾರ ಮಧ್ಯಾಹ್ನದವರೆಗೂ ತಂಡಗಳ ಆಗಮನ ಮುಂದುವರಿದಿತ್ತು. ಪ್ರವಾಸದ ಪ್ರಯಾಸದ ನಡುವೆಯೂ ಕ್ರೀಡಾಪಟುಗಳ ಮುಖದಲ್ಲಿ ಆತ್ಮವಿಶ್ವಾಸ ಕಂಡುಬರುತ್ತಿತ್ತು.
ಅಗತ್ಯ ಮುನ್ನೆಚ್ಚರಿಕೆ
ಪ್ರತಿ ರಾಜ್ಯದಿಂದ ಖೋಖೋ (12), ವಾಲಿಬಾಲ್ (12), ಕಬಡ್ಡಿ (10) ಹಾಗೂ ಮೂವರು ಅಧಿಕಾರಿಗಳು ಸೇರಿ 37 ಜನರ ತಂಡ ಪಾಲ್ಗೊಳ್ಳುತ್ತಿದೆ. ಇದೇ ಪ್ರಥಮ ಬಾರಿಗೆ ನಗರದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟ ಸಂಘಟಿಸಲಾಗಿದ್ದು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ ಅಧಿಕಾರಿ ವರ್ಗ ಎಲ್ಲ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದೆ. ವಸತಿ, ಊಟದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಕ್ರೀಡಾ ಪ್ರಾಧಿಕಾರದ ಸೂಚನೆಯಂತೆ ಬೆಳಗಿನ ಉಪಾಹಾರವಾಗಿ ಪ್ರತಿ ದಿನ ಬ್ರೆಡ್, ಹಣ್ಣು, ಮೊಟ್ಟೆ, ಹಾಲು ನೀಡಲಾಗುತ್ತಿದೆ. ಬುಧವಾರ ಮಧ್ಯಾಹ್ನ ಊಟದಲ್ಲಿ ಚಪಾತಿ, ಎರಡು ಬಗೆ ಬಾಜಿ, ಅನ್ನ, ಸಾಂಬಾರು, ಮೊಸರು ನೀಡಲಾಗಿದೆ. ಕ್ರೀಡಾಪಟುಗಳಿಗೆ ಊಟ ನೀಡುವ ಮುನ್ನ ಆಹಾರವನ್ನು ತಜ್ಞರು ಪರಿಶೀಲಿಸಿದ್ದಾರೆ. ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ನೇತೃತ್ವದಲ್ಲಿ ಎಡಿಸಿ ಶಶಿಧರ ಕುರೇರ, ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ ಹಾಗೂ ಇತರ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
9 ಅಂಕಣ: ಕಬಡ್ಡಿ, ಖೋಖೋ ಹಾಗೂ ವಾಲಿಬಾಲ್ ಪಂದ್ಯಗಳನ್ನು ನಡೆಸಲು ಪ್ರತಿ ಕ್ರೀಡೆಗೆ ತಲಾ ಮೂರರಂತೆ 9 ಅಂಗಣ ಸಿದ್ಧಪಡಿಸಲಾಗಿದೆ. ಅಂಕಣಗಳಿಗೆ ದೇಶ, ರಾಜ್ಯದ ಪ್ರಮುಖ ನದಿಗಳ ಹೆಸರಿಡಲಾಗಿದೆ. ಗಂಗಾ, ಯಮುನಾ, ಸರಸ್ವತಿ, ಸಿಂಧು, ನೇತ್ರಾವತಿ, ಕಾಳಿ, ವರದಾ, ಕಾವೇರಿ ಎಂಬ ಅಂಕಣಗಳು ಕ್ರೀಡಾಪಟುಗಳ ಸಾಮರ್ಥ್ಯ ಪರೀಕ್ಷೆಗೆ ಸಾಕ್ಷಿಯಾಗಲಿವೆ. ಏಳು ಮಹಿಳೆಯರು ಸೇರಿ 50ಕ್ಕೂ ಹೆಚ್ಚು ಅಧಿಕಾರಿಗಳು ವಿವಿಧ ಜವಾಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. 150ಕ್ಕೂ ಹೆಚ್ಚು ಸ್ವಯಂ ಸೇವಕರು ತಮಗೆ ವಹಿಸಿದ ಕಾರ್ಯ ಮಾಡುತ್ತಿದ್ದಾರೆ. ಸ್ಥಳದಲ್ಲಿ ವೈದ್ಯಕೀಯ ಸೇವೆ ನೀಡಲು ತಂಡ ಇದ್ದು, ಪೊಲೀಸರೂ ಭದ್ರತಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅಗ್ನಿಶಾಮಕ ವಾಹನ ಹಾಗೂ ಆ್ಯಂಬುಲೆನ್ಸ್ಗಳನ್ನು ಕ್ರೀಡಾಂಗಣದಲ್ಲಿ ಸನ್ನದ್ಧವಾಗಿ ಇಡಲಾಗಿದೆ. ರಾಷ್ಟ್ರಮಟ್ಟದ ಈ ಕ್ರೀಡಾಕೂಟಕ್ಕೆ ಹಾವೇರಿ ನಗರ ಸಾಕ್ಷಿಯಾಗಲಿದ್ದು, ಸಾರ್ವಜನಿಕರೂ ಇದರ ಯಶಸ್ಸಿಗಾಗಿ ಕೈಜೋಡಿಸಿದ್ದಾರೆ.
--
ಪೈಕಾ: ಇಂದಿನ ಪಂದ್ಯಗಳು
ವಾಲಿಬಾಲ್: ಹರಿಯಾಣ-ಪಂಜಾಬ್, ಹಿಮಾಚಲ ಪ್ರದೇಶ-ಗೋವಾ, ಗುಜರಾತ್-ತ್ರಿಪುರಾ, ಉತ್ತರ ಪ್ರದೇಶ-ಆಂಧ್ರ, ಮಹಾರಾಷ್ಟ್ರ-ಮಧ್ಯಪ್ರದೇಶ, ತಮಿಳುನಾಡು- ದೆಹಲಿ, ಓರಿಸ್ಸಾ-ಬಿಹಾರ, ಮಣಿಪುರ-ಉತ್ತರಾಖಂಡ, ಕರ್ನಾಟಕ-ಹರಿಯಾಣ, ಕೇರಳ-ಗೋವಾ (ಬೆಳಗ್ಗೆ). ಒಡಿಶಾ-ತ್ರಿಪುರಾ, ಉತ್ತರ ಪ್ರದೇಶ-ಮಣಿಪುರ, ಮಧ್ಯಪ್ರದೇಶ-ಪಂಜಾಬ್, ಹಿಮಾಚಲಪ್ರದೇಶ-ಕೇರಳ, ಗುಜರಾತ್-ಬಿಹಾರ, ಆಂಧ್ರ-ಉತ್ತರಾಖಂಡ, ಕರ್ನಾಟಕ-ಪಂಜಾಬ್, ದೆಹಲಿ-ಗೋವಾ, ಮಹಾರಾಷ್ಟ್ರ-ಹರ್ಯಾಣ,ತ.ನಾ.-ಕೇರಳ (ಸಂಜೆ).
ಖೋಖೋ: ಮಹಾರಾಷ್ಟ್ರ-ಉತ್ತರಾಖಂಡ, ಗುಜರಾತ್-ಬಿಹಾರ, ಮಧ್ಯಪ್ರದೇಶ-ಹಿಮಾಚಲಪ್ರದೇಶ, ಕರ್ನಾಟಕ-ಪಶ್ಚಿಮ ಬಂಗಾಳ, ಉತ್ತರಪ್ರದೇಶ -ಮಣಿಪುರ, ತಮಿಳುನಾಡು-ತ್ರಿಪುರಾ, ಪಂಜಾಬ್ -ಗೋವಾ, ಹರಿಯಾಣ-ದೆಹಲಿ, ಬಿಹಾರ-ಓರಿಸ್ಸಾ, ಗುಜರಾತ್-ಉತ್ತರಾಖಂಡ (ಬೆಳಗ್ಗೆ). ಪಂಜಾಬ್-ಹರಿಯಾಣ, ದೆಹಲಿ-ಗೋವಾ, ಮಹಾರಾಷ್ಟ್ರ-ಗುಜರಾತ್, ಉತ್ತರಾಖಂಡ-ಒಡಿಶಾ, ಉತ್ತರಪ್ರದೇಶ-ತಮಿಳುನಾಡು, ಆಂಧ್ರ-ಮಣಿಪುರ, ಕರ್ನಾಟಕ-ಮಧ್ಯಪ್ರದೇಶ, ಕೇರಳ-ಪ. ಬಂಗಾಳ (ಸಂಜೆ).
ಕಬಡ್ಡಿ: ಉತ್ತರಪ್ರದೇಶ-ಉತ್ತರಾಖಂಡ, ಮಧ್ಯಪ್ರದೇಶ-ಒಡಿಶಾ, ಆಂಧ್ರ-ಮಣಿಪುರ, ತ.ನಾ.-ದೆಹಲಿ, ಮಹಾರಾಷ್ಟ್ರ-ತ್ರಿಪುರಾ, ಕರ್ನಾಟಕ-ಕೇರಳ, ಹರ್ಯಾಣ-ಬಿಹಾರ, ಗುಜರಾತ್-ಗೋವಾ (ಬೆಳಗ್ಗೆ). ಆಂಧ್ರ-ಹಿಮಾಚಲ, ಪಂಜಾಬ್-ತ್ರಿಪುರಾ, ಕೇರಳ-ಮಹಾರಾಷ್ಟ್ರ, ಉತ್ತರ ಪ್ರದೇಶ-ಒಡಿಶಾ, ಮಧ್ಯಪ್ರದೇಶ-ಉತ್ತರಾಖಂಡ, ದೆಹಲಿ-ಹಿಮಾಚಲ, ಕರ್ನಾಟಕ-ಪಂಜಾಬ್ (ಸಂಜೆ).
--
ಪೈಕಾಗೆ ಹರ್ಷದ ಹೊನಲು
ಹಾವೇರಿ: ರಾಷ್ಟ್ರಮಟ್ಟದ ಪೈಕಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬಳಿಕ ವಿವಿಧ ರಾಜ್ಯಗಳ ತಂಡಗಳ ನಡುವೆ ಹೊನಲು ಬೆಳಕಿನಲ್ಲಿ ಪಂದ್ಯಗಳು ಆರಂಭವಾದವು. ಪಂದ್ಯ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು.
ಮಹಾರಾಷ್ಟ್ರ ಮತ್ತು ಆತಿಥೇಯ ಕರ್ನಾಟಕದ ನಡುವೆ ವಾಲಿಬಾಲ್ ಪಂದ್ಯ ನಡೆಯಿತು. ಮತ್ತೊಂದು ಕೋರ್ಟ್ನಲ್ಲಿ ಹಿಮಾಚಲ ಪ್ರದೇಶ-ತಮಿಳುನಾಡು ಮಧ್ಯೆ ಕಬಡ್ಡಿ ಪಂದ್ಯ ಏರ್ಪಟ್ಟಿತು. ಇನ್ನೊಂದು ಅಂಕಣದಲ್ಲಿ ಆಂಧ್ರಪ್ರದೇಶ, ತ್ರಿಪುರಾ ತಂಡಗಳು ಖೋಖೋ ಪಂದ್ಯದಲ್ಲಿ ಸೆಣಸಾಡಿದವು.
ಬುಧವಾರದ ಪಂದ್ಯಗಳು
ವಾಲಿಬಾಲ್: ಮಹಾರಾಷ್ಟ್ರ-ಕರ್ನಾಟಕ, ಹಿಮಾಚಲ ಪ್ರದೇಶ- ತಮಿಳುನಾಡು, ಗುಜರಾತ್-ಒಡಿಶಾ, ಆಂಧ್ರಪ್ರದೇಶ-ಮಣಿಪುರ, ಹರಿಯಾಣ-ಮಧ್ಯಪ್ರದೇಶ, ಉತ್ತರಪ್ರದೇಶ-ಉತ್ತರಾಖಂಡ, ಬಿಹಾರ-ತ್ರಿಪುರಾ, ಕೇರಳ- ದೆಹಲಿ.
ಕಬಡ್ಡಿ: ಹಿಮಾಚಲಪ್ರದೇಶ-ತಮಿಳುನಾಡು, ದೆಹಲಿ-ಮಣಿಪುರ, ಕರ್ನಾಟಕ-ತ್ರಿಪುರಾ, ಪಂಜಾಬ್-ಕೇರಳ, ಗುಜರಾತ್-ಬಿಹಾರ, ಹರಿಯಾಣ-ಗೋವಾ.
ಖೋಖೋ: ಆಂಧ್ರಪ್ರದೇಶ-ತ್ರಿಪುರಾ, ತಮಿಳುನಾಡು-ಮಣಿಪುರ, ಕರ್ನಾಟಕ-ಹಿಮಾಚಲಪ್ರದೇಶ, ಕೇರಳ-ಮಧ್ಯಪ್ರದೇಶ.
- ನಾರಾಯಣ ಹೆಗಡೆ