ರೈತ ಆತ್ಮಹತ್ಯೆ: ಸಿಎಂರಾಜಿನಾಮೆ ಕೊಡಲಿ
ಹಾವೇರಿ: ರೈತರ ಸಮಸ್ಯೆಗೆ ಸ್ಪಂದಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ಕೆಜೆಪಿ ಬುಧವಾರ ಪ್ರತಿಭಟನೆ ನಡೆಸಿತು. ಮಾಜಿ ಶಾಸಕ ನೆಹರೂ ಓಲೇಕಾರ ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕೆಜೆಪಿ ಕಾರ್ಯಕರ್ತರು ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಟೈರ್ಗೆ ಬೆಂಕಿ ಹಚ್ಚಿ ಸಿಎಂ ಸಿದ್ದರಾಮಯ್ಯ, ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ನೆಹರೂ ಓಲೇಕಾರ ಮಾತನಾಡಿ, ಕಬ್ಬು ಬೆಳೆಗಾರರು, ಇತರ ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸಿಎಂ ಸಿದ್ದರಾಮಯ್ಯ ದುರ್ವರ್ತನೆ ತೋರುತ್ತಿದ್ದು, ಸುವರ್ಣಸೌಧದ ಎದುರು ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದರೂ ಆ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ವಿಠಲ ಅರಭಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತರು ಮಾಡಿಕೊಳ್ಳುತ್ತಿರುವ ಆತ್ಮಹತ್ಯೆಗೆ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಆರೋಪಿಸಿದರು. ತಾಪಂ ಅಧ್ಯಕ್ಷೆ ರಿಹಾನ್ ಚಾಂದ್ ಶೇಖ್, ಎಪಿಎಂಸಿ ಅಧ್ಯಕ್ಷ ಮೂರುಗೇಶ ಅಂಗಡಿ, ಕೆಜೆಪಿ ಜಿಲ್ಲಾ ವಕ್ತಾರ ಸುರೇಶ ಹೊಸಮನಿ, ಕೆ.ಸಿ. ಕೋರಿ, ಗಿರೀಶ ತುಪ್ಪದ, ಜಗದೀಶ ಮಲಗೋಡ, ರುದ್ರಪ್ಪ ಹಾವೇರಿ, ಶಂಕ್ರಣ್ಣ ಸಣ್ಣಪ್ಪನವರ, ಬಾಬುಸಾಬ ಮೋಮಿನಗಾರ, ರಾಜು ಆನವಟ್ಟಿ, ಗಣೇಶ ಮೇಲ್ಮುರಿ ಇದ್ದರು.
ಕೈಗಾರಿಕಾ ಸರಬರಾಜು ಸಂಘಕ್ಕೆ ಆಯ್ಕೆ
ಹಾವೇರಿ: ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸಂಜೀವಕುಮಾರ ಮುದಿಗೌಡ ಪಾಟೀಲ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀನಿವಾಸ ರಾಮಕೃಷ್ಣಪ್ಪ ವೆಂಕಣ್ಣನವರ ಆಯ್ಕೆಯಾಗಿದ್ದಾರೆ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಪಿಂಜಾರಾ ಸಂಘಕ್ಕೆ ಆಯ್ಕೆ
ಹಿರೇಕೆರೂರು: ನದಾಫ್, ಪಿಂಜಾರ ತಾಲೂಕು ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮೇದೂರ ಗ್ರಾಮದ ಚಮನಸಾಬ ಗುಬ್ಬಿ ಅಧ್ಯಕ್ಷ, ರಟ್ಟಿಹಳ್ಳಿಯ ಬುಡನಸಾಬ ಬಡಗಿ ಉಪಾಧ್ಯಕ್ಷ, ಹಿರೇಕೆರೂರಿನ ಹಸನಸಾಬ ನದಾಫ ಕಾರ್ಯದರ್ಶಿ, ರಟ್ಟಿಹಳ್ಳಿಯ ನೂರಅಹ್ಮದ್ ಬಿಡಿವಾಲೆ ಸಹಕಾರ್ಯದರ್ಶಿ, ಚಿಕ್ಕಕಬ್ಬಾರ ಗ್ರಾಮದ ಟಿಪ್ಪು ಸಾಬ್ ಕೋಟಿಹಾಳ ಖಚಾಂಚಿಯಾಗಿ ಆಯ್ಕೆಯಾಗಿದೆ. ಕಾರ್ಯಕಾರಿ ಸಮಿತಿಗೆ 21 ಜನರನ್ನು ನೇಮಿಸಲಾಗಿದೆ ಎಂದು ಕಾರ್ಯದರ್ಶಿ ಎಚ್.ವೈ. ನದಾಫ ತಿಳಿಸಿದ್ದಾರೆ.
ಸಹಾಯಧನ: ತಾಲೂಕಿನ ನಧಾಪ ಪಿಂಜಾರ ಸಂಘದ ವತಿಯಿಂದ ಮುಸ್ಲಿಂ ಪ್ರವರ್ಗ 1ಕ್ಕೆ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಿದ್ದು, ಅರ್ಹರು ಅರ್ಜಿ ನಮೂನೆಗಳನ್ನು ಸಂಘದ ಕಾರ್ಯದರ್ಶಿಯಿಂದ ಪಡೆದು, ಭರ್ತಿ ಮಾಡಿ, ಡಿ. 5ರೊಳಗೆ ಕಚೇರಿಗೆ ತಲುಪಿಸಬೇಕು. ಮಾಹಿತಿಗೆ ದೂ. 97315 26621, 94465 59864 ಸಂಪರ್ಕಿಸಬಹುದು