24 ಗಂಟೆ ವೈದ್ಯಕೀಯ ಸೇವೆ ಆರಂಭ
ಹಾವೇರಿ: ನಗರದಲ್ಲಿ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸೇವೆ ನೀಡುವಲ್ಲಿ ಇದುವರೆಗೆ ಇದ್ದ ಕೊರತೆ ನೀಗಿಸುವ ನಿಟ್ಟಿನಲ್ಲಿ ಜೀವನರೇಖಾ ಎಮರ್ಜೆನ್ಸಿ ಕೇರ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದ್ದು, ಡಿ. 1ರಂದು ಆರೋಗ್ಯ ಸಚಿವ ಯು.ಟಿ. ಖಾದರ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯರ ತಂಡ ತಿಳಿಸಿದೆ.
ಆಸ್ಪತ್ರೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ ಅರುಣ ಅರಳಿ, ಡಾ ರವಿಕುಮಾರ ಮಲ್ಲಾಡದ, ನಗರದಲ್ಲಿ ತುರ್ತು ಚಿಕಿತ್ಸೆ ಹಾಗೂ ದಿನದ 24 ಗಂಟೆ ವೈದ್ಯಕೀಯ ಸೇವೆ ದೊರೆಯುವ ಆಸ್ಪತ್ರೆಗಳ ಕೊರತೆ ಇತ್ತು. ಆದ್ದರಿಂದ ಸುಮಾರು ರು. 2 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ, 50 ಬೆಡ್ಗಳ ಆಸ್ಪತ್ರೆ ಆರಂಭಿಸಲಾಗುತ್ತಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಹುಬ್ಬಳ್ಳಿ ಅಥವಾ ದಾವಣಗೆರೆಗೆ ಕರೆದೊಯ್ಯುವುದು ತಪ್ಪಲಿದೆ. ಅಲ್ಲದೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದ್ದು, ಜಿಲ್ಲೆಯ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಐಸಿಯು, ಎನ್ಐಸಿಯು, ಲ್ಯಾಬೋರೇಟರಿ, ಕೃತಕ ಉಸಿರಾಟ, ಕೃತಕ ಹೃದಯ ಸ್ತಂಭನ ವ್ಯವಸ್ಥೆ ನೀಡುವ ಯಂತ್ರಗಳನ್ನು ಅಳವಡಿಸಲಾಗಿದೆ. ತಜ್ಞ ವೈದ್ಯರ ಸೇವೆ ಲಭ್ಯವಿದ್ದು, ಶೀಘ್ರದಲ್ಲಿ ಬ್ಲಡ್ ಬ್ಯಾಂಕ್ ಹಾಗೂ ಡಯಾಲಿಸಿಸ್ ಯಂತ್ರ ಸೇವೆಯನ್ನೂ ಒದಗಿಸಲಾಗುವುದು. ಉದ್ಘಾಟನೆಗೂ ಮುನ್ನವೇ 200ಕ್ಕೂ ಹೆಚ್ಚು ಜನರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ. ಡಿ. 1ರಂದು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆರೋಗ್ಯ ಸಚಿವ ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಸಚಿವ ಪ್ರಕಾಶ ಹುಕ್ಕೇರಿ, ಶಾಸಕ ರುದ್ರಪ್ಪ ರಮಾಣಿ, ಬಸವರಾಜ ಶಿವಣ್ಣನವರ, ಮನೋಹರ ತಹಶೀಲ್ದಾರ, ಸಂಸದ ಶಿವಕುಮಾರ ಉದಾಸಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಡಾ ರೋಹನ ಕಾಮತ್, ಡಾ ಕಾಂತೇಶ ಭೀಮಕ್ಕನವರ ಇದ್ದರು.