ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಫೈನಲ್

Lingaraj Badiger
Updated On : 30 Nov 2013, 10:55 am

ಕನ್ನಡಪ್ರಭ ವಾರ್ತೆ, ಹಾವೇರಿ, ನ. 29
39ನೇ ರಾಷ್ಟ್ರೀಯ ಮಹಿಳಾ ಪೈಕಾ ಕ್ರೀಡಾಕೂಟದ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಸೆಮಿಫೈನಲ್ ಹಾಗೂ ಫೈನಲ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ.
ಮೂರು ದಿನಗಳಿಂದ ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟ ಅಂತಿಮ ಘಟಕ್ಕೆ ತಲುಪಿದೆ. ವಾಲಿಬಾಲ್, ಕಬಡ್ಡಿ ಹಾಗೂ ಖೋಖೋ ಪಂದ್ಯಗಳ ಆರಂಭಿಕ ಹಂತದ ಪಂದ್ಯಗಳು ಶುಕ್ರವಾರ ಮುಕ್ತಾಯಗೊಂಡಿದ್ದು, ಇನ್ನು ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಶುಕ್ರವಾರ ರಾತ್ರಿ ಹೊನಲು ಬೆಳಕಿನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದು, ಶನಿವಾರ ಪ್ರಶಸ್ತಿ ಸುತ್ತಿನ ಪಂದ್ಯಗಳು ಜರುಗಲಿವೆ.
ವಾಲಿಬಾಲ್: ರಾಜ್ಯ ಹೋರಾಟ ಅಂತ್ಯ
ವಾಲಿಬಾಲ್ ಪಂದ್ಯಗಳಲ್ಲಿ ಆರಂಭದಲ್ಲಿ ಪ್ರಾಬಲ್ಯ ಮೆರೆದಿದ್ದ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿದೆ. ಶುಕ್ರವಾರ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕ ತಂಡ ಮಧ್ಯಪ್ರದೇಶ ವಿರುದ್ಧ 25-10, 25-5 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರೂ ಉಪಾಂತ್ಯ ಪ್ರವೇಶ ಸಾಧ್ಯವಾಗಲಿಲ್ಲ. ವಾಲಿಬಾಲ್ ರ್ಕ್ವಾಟರ್ ಫೈನಲ್‌ನಲ್ಲಿ ಉತ್ತರಪ್ರದೇಶ-ಒಡಿಶಾ, ದೆಹಲಿ-ಮಹಾರಾಷ್ಟ್ರ, ಗುಜರಾತ್-ಪಂಜಾಬ್, ಆಂಧ್ರಪ್ರದೇಶ-ಹಿಮಾಚಲಪ್ರದೇಶ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ನಾಲ್ಕು ತಂಡಗಳು ಸೆಮಿಫೈನಲ್‌ನಲ್ಲಿ ಶನಿವಾರ ಸೆಣಸಲಿದ್ದು, ಗೆದ್ದ ಎರಡು ತಂಗಳು ಪ್ರಶಸ್ತಿಗೆ ಸೆಣಸಲಿವೆ.
ಶುಕ್ರವಾರ ಬೆಳಗಿನ ಫಲಿತಾಂಶ
ವಾಲಿಬಾಲ್: ತಮಿಳುನಾಡು ವಿರುದ್ಧ ಕೇರಳಕ್ಕೆ 25-12, 25-23 ಅಂಕಗಳಿಂದ ಗೆಲವು. ಮಧ್ಯಪ್ರದೇಶ ವಿರುದ್ಧ ಕರ್ನಾಟಕಕ್ಕೆ 25-10, 25-5 ಅಂತರದ ಜಯ. ದೆಹಲಿ ವಿರುದ್ಧ ಹಿಮಾಚಲ ಪ್ರದೇಶಕ್ಕೆ 25-18, 25-10 ಅಂಕಗಳ ವಿಜಯ. ಮಹಾರಾಷ್ಟ್ರಕ್ಕೆ ಹರಿಯಾಣ ವಿರುದ್ಧ 25-10, 25-7 ಅಂಕಗಳ ಗೆಲವು.
ಖೋಖೋ: ಮಧ್ಯಪ್ರದೇಶದ ಎದುರು ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ವಿರುದ್ಧ ತಮಿಳುನಾಡು, ಪಂಜಾಬ್ ವಿರುದ್ಧ ದೆಹಲಿ, ಒಡಿಶಾ ವಿರುದ್ಧ ಮಹಾರಾಷ್ಟ್ರ, ತ್ರಿಪುರಾ ಎದುರು ಮಣಿಪುರ, ಗೋವಾ ವಿರುದ್ಧ ಹರಿಯಾಣ, ಕೇರಳ ವಿರುದ್ಧ ಕರ್ನಾಟಕ, ಹಿಮಾಚಲಪ್ರದೇಶ ತಂಡದ ವಿರುದ್ಧ ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡ ವಿರುದ್ಧ ಬಿಹಾರ ತಂಡ ಜಯ ಗಳಿಸಿದವು.
ಕಬಡ್ಡಿ: ಮಣಿಪುರ ವಿರುದ್ಧ ಹಿಮಾಚಲಪ್ರದೇಶ ಗೆಲವು ಸಾಧಿಸಿತು. ಮಹಾರಾಷ್ಟ್ರವನ್ನು ಕರ್ನಾಟಕ ತಂಡ 34-11 ಅಂಕಗಳಿಂದ ಸೋಲಿಸಿತು. ಆಂಧ್ರ ವಿರುದ್ಧ ತಮಿಳುನಾಡು, ತ್ರಿಪುರಾ ವಿರುದ್ಧ ಕೇರಳ, ಗುಜರಾತ್ ವಿರುದ್ಧ ಹರಿಯಾಣ, ಗೋವಾ ವಿರುದ್ಧ ಬಿಹಾರ, ಮಹಾರಾಷ್ಟ್ರದೆದುರು ಪಂಜಾಬ್, ಆಂಧ್ರಪ್ರದೇಶ ವಿರುದ್ಧ ದೆಹಲಿ, ಮಧ್ಯಪ್ರದೇಶದ ವಿರುದ್ಧ ಹಿಮಾಚಲ ಪ್ರದೇಶ ಗೆಲುವು ಸಾಧಿಸಿದವು.
ಉಪಾಂತ ಪ್ರವೇಶಿಸಿದ ತಂಡಗಳು
ಪೈಕಾ ಕ್ರೀಡಾಕೂಟದಲ್ಲಿ ಶುಕ್ರವಾರ ಸಂಜೆ ನಡೆದ ಕ್ವಾರ್ಟರ್ ಫೈನಲ್ ವಾಲಿಬಾಲ್ ಪಂದ್ಯದ ಫಲಿತಾಂಶ ಹೊರಬಿದ್ದಿದೆ. ಆಂಧ್ರ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಹಿಮಾಚಲ ಪ್ರದೇಶ 25-13, 25-7, 25-22 ಅಂಕಗಳ ಗೆಲುವು ಸಾಧಿಸಿದೆ. ಒರಿಸ್ಸಾ ತಂಡವನ್ನು ಉತ್ತರ ಪ್ರದೇಶ 25-7, 25-9, 25-11 ಅಂತರದಿಂದ ಮಣಿಸಿದೆ. ಮತ್ತೊಂದು ಪಂದ್ಯದಲ್ಲಿ ದೆಹಲಿ ತಂಡವನ್ನು 22-25, 25-22, 25-18, 25-22 ಅಂಕಗಳಿಂದ ಸೋಲಿಸಿದ ಮಹಾರಾಷ್ಟ್ರವೂ ಉಪಾಂತ್ಯಕ್ಕೆ ಲಗ್ಗೆ ಇಟ್ಟಿದೆ. ಕಬಡ್ಡಿಯಲ್ಲಿ ದೆಹಲಿಯನ್ನು 20-15 ಅಂಕಗಳಿಂದ ಸೋಲಿಸಿದ ಹರ್ಯಾಣ ಸೆಮಿಫೈನಲ್ ಪ್ರವೇಶಿಸಿದೆ.

ಇಂದು ಸಮಾರೋಪ
ಹಾವೇರಿ: ಮೂರು ದಿನಗಳಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 39ನೇ ರಾಷ್ಟ್ರೀಯ ಮಹಿಳಾ ಪೈಕಾ ಕ್ರೀಡಾಕೂಟ ಶನಿವಾರ ಮುಕ್ತಾಯವಾಗಲಿದ್ದು, ಫೈನಲ್ ಪಂದ್ಯಗಳು ನಡೆಯಲಿವೆ. ಶನಿವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಏರ್ಪಡಿಸಲಾಗಿದ್ದು, ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ನೆಹರು ಯುವ ಕೇಂದ್ರದ ಮಹಾನಿರ್ದೇಶಕ ಸಲೀಂ ಅಹಮದ್ ಬಹುಮಾನ ವಿತರಿಸಲಿದ್ದಾರೆ. ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಪಂ ಸಿಇಒ ಕೆ.ಬಿ. ಆಂಜನಪ್ಪ, ಪೈಕಾ ಉಪನಿರ್ದೇಶಕ ಎಂ.ಸಿ. ರಮೇಶ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ವೆ. ಮುತ್ತುಕಾಮಾಚ್ಚಿ ಪಾಲ್ಗೊಳ್ಳಲಿದ್ದಾರೆ.

ಊಟಕ್ಕೆ ತೀವ್ರ ಪರದಾಟ
ಹಾವೇರಿ: ಇಲ್ಲಿ ನಡೆಯುತ್ತಿರುವ ಪೈಕಾ ಮಹಿಳಾ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ವಿವಿಧ ರಾಜ್ಯಗಳ ಕ್ರಿಡಾಪಟುಗಳು ಊಟಕ್ಕಾಗಿ ಪರದಾಡುತ್ತಿದ್ದಾರೆ. ಸ್ವಯಂ ಸೇವಕರು ಹಾಗೂ ಪಾಸ್ ಪಡೆದವರ ಸಂಖ್ಯೆಯೇ ಹೆಚ್ಚಿದ್ದರಿಂದ ಆಟಗಾರರು ಊಟಕ್ಕೆ ಪರದಾಡವಂತಾಗಿದೆ.
ಜಿಲ್ಲಾಡಳಿತ ಹಾಗೂ ಕ್ರೀಡಾಕೂಟ ಸಂಘಟಕರು ಯಾವುದೇ ಸಮಸ್ಯೆ ಎದುರಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದರೂ ಊಟಕ್ಕೆ ಪರದಾಡುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಗುರುವಾರ ರಾತ್ರಿ ಹೊನಲು ಬೆಳಕಿನಲ್ಲಿ ಪಂದ್ಯಗಳು ನಡೆಯುತ್ತಿದ್ದ ವೇಳೆ ಪಾಸ್ ಪಡೆದವರು ಊಟ ಮುಗಿಸಿದ್ದರು. ಆಮೇಲೆ ಆಟಗಾರರಿಗೆ ಊಟ ಸಿಗದೆ ಪರದಾಡುವಂತಾಯಿತು. ಮೊದಲು 150 ಸ್ವಯಂ ಸೇವಕರಿಗೆ ಪಾಸ್ ವಿತರಣೆ ಮಾಡಲಾಗಿತ್ತು. ಆದರೆ ಎರಡನೇ ದಿನದ ವೇಳೆಗೆ ಪಾಸ್ ಪಡೆದವರ ಸಂಖ್ಯೆ 300 ದಾಟಿತ್ತು. ಶುಕ್ರವಾರವೂ ಪಾಸ್‌ಗೆ ಬೇಡಿಕೆ ಬಂದಿತ್ತು. ಆದರೆ ಸಂಘಟಕರು ಎಚ್ಚೆತ್ತುಕೊಂಡು ಹೊಸದಾಗಿ ಪಾಸ್ ವಿತರಿಸುವುದನ್ನು ಬಂದ್ ಮಾಡಿದ್ದಾರೆ.
ಧೂಳು-ಗೋಳು: ಮೂರು ದಿನಗಳಿಂದ ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಪಂದ್ಯಗಳು ನಡೆಯುತ್ತಿದ್ದು, ಕ್ರೀಡಾಂಗಣ ತುಂಬ ಧೂಳು ಆವರಿಸಿದೆ. ಗಾಳಿಯೂ ಜೋರಾಗಿ ಬೀಸುತ್ತಿರುವುದರಿಂದ ಧೂಳು ಏಳುತ್ತಿದೆ. ಆಗಾಗ ಟ್ಯಾಂಕರ್‌ನಲ್ಲಿ ನೀರನ್ನು ಚಿಮುಕಿಸುತ್ತಿದ್ದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಪೊಲೀಸರು, ಸ್ವಯಂ ಸೇವಕರು, ಅಧಿಕಾರಿಗಳು ಮೂಗಿಗೆ ಟವೆಲ್, ಮಾಸ್ಕ್ ಹಾಕಿಕೊಂಡು ತಿರುಗುತ್ತಿದ್ದಾರೆ. ಆಟಗಾರರು, ಪ್ರೇಕ್ಷಕರೂ ಧೂಳಿನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement