ರೈತನ ಆತ್ಮಹತ್ಯೆಗೆ ಸರ್ಕಾರವೇ ಹೊಣೆ
ಹಾವೇರಿ: ಬೆಳಗಾವಿ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತ ವಿಠ್ಠಲ ಅರಭಾವಿ ಆತ್ಮಹತ್ಯೆ ಮಾಡಿಕೊಳ್ಳಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಶುಕ್ರವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎ. ಹಿರೇಮಠ ಮಾತನಾಡಿ, ಕಬ್ಬಿಗೆ ದರ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸಲಿಲ್ಲ. ಸರ್ಕಾರದ ವಿಳಂಬ ಹಾಗೂ ರೈತ ವಿರೋಧಿ ನೀತಿಯೇ ಇದಕ್ಕೆಲ್ಲ ಕಾರಣವಾಗಿದೆ. ರೈತನ ಆತ್ಮಹತ್ಯೆಗೆ ಸರ್ಕಾರವೇ ಹೊಣೆ ಹೊರಬೇಕು. ಸಿದ್ದರಾಮಯ್ಯ ಸಂಪುಟದಲ್ಲಿರುವ ಸಚಿವರು ಹಾಗೂ ಶಾಸಕರು ನಡೆಸುವ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಕಳೆದ ವರ್ಷದ ಕಬ್ಬಿನ ಬಾಕಿ ಹಣ ಪಾವತಿಸದಿರುವುದು ವಿಠ್ಠಲ ಅರಭಾವಿ ಆತ್ಯಹತ್ಯೆ ಮಾಡಿಕೊಳ್ಳುವಂತಾಯಿತು ಎಂದು ಆರೋಪಿಸಿದರು.
ಹಾಲಿ, ಮಾಜಿ ಸಚಿವರು ಹಾಗೂ ಶಾಸಕರ ಒಡೆತನದಲ್ಲಿ ಹೆಚ್ಚಿನ ಸಕ್ಕರೆ ಕಾರ್ಖಾನೆಗಳಿದ್ದು, ಸರ್ಕಾರ ಅವರ ಒತ್ತಡಕ್ಕೆ ಮಣಿಯುತ್ತಿದೆ. ರೈತರಿಗೆ ಕೊಡಬೇಕಾದ ನ್ಯಾಯಯುತ ಪರಿಹಾರಕ್ಕೆ ವಿಳಂಬ ಮಾಡುತ್ತಿದೆ. ಸರ್ಕಾರ ರೈತರ ವಿರೋಧಿ ನೀತಿಯನ್ನು ಸಂಘ ಖಂಡಿಸುತ್ತದೆ ಎಂದರು.
ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಬೇಕು. ಒಂದು ತಿಂಗಳೊಳಗಾಗಿ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತ ಸಂಘದ ನಗರ ಘಟಕದ ಅಧ್ಯಕ್ಷ ಸುರೇಶ ಚಲವಾದಿ, ಶಿವಬಸಪ್ಪ ಗೋವಿ, ಸೈಯದಸಾಬ್ ಡಿಲೋರಿ, ಖಾಶಿಂಸಾಬ್ ತಹಶೀಲ್ದಾರ, ಮಹಾದೇವಪ್ಪ ಗುಂಜಾಳ, ಇಮ್ತಿಯಾಜ್ ಬಿಜಾಪುರ, ನಜೀರಸಾಬ್, ಮರಿಯಪ್ಪ, ಅಣ್ಣೆಪ್ಪ ಬೋಳುಗುಳಿ, ಬೀರಪ್ಪ ಸೋಮನಕಟ್ಟೆ, ಹನುಮಂತಪ್ಪ ನಿಂಗದಳ್ಳಿ ಹಾಗೂ ನೂರಾರು ರೈತರು ಇದ್ದರು.