ಸ್ವೇಚ್ಛೆಯಿಂದ ಸ್ವಾತಂತ್ರ್ಯಕ್ಕೆ ಮಸಿ: ರೂಪಾ
ಬ್ಯಾಡಗಿ: ಸ್ವೇಚ್ಛಾಚಾರದ ಬದುಕು ಮೈಗೂಡಿಸಿಕೊಳ್ಳುತ್ತಿರುವ ನಾವು ಎರಡು ಶತಮಾನಗಳಷ್ಟು ಸುದೀರ್ಘ ಹೋರಾಟದಿಂದ ಸಿಕ್ಕ ಸ್ವಾತಂತ್ರ್ಯಕ್ಕೆ ಮಸಿ ಬಳಿಯುತ್ತಿದ್ದೇವೆಂದು ರೂಪಾ ಸಜ್ಜನರ ಖೇದ ವ್ಯಕ್ತಪಡಿಸಿದರು.
ಎಸ್‌ಎಸ್‌ಪಿಎನ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಯೋಜಿಸಿದ್ದ ದತ್ತಿ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ದಾರ್ಶನಿಕರನ್ನು ಪೂಜ್ಯ ಭಾವನೆಯಿಂದ ನೋಡುತ್ತಿರುವ ದೇಶದಲ್ಲೇ ಅವರ ಸಂದೇಶಗಳು ಮೂಲೆ ಗುಂಪಾಗುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ, ರಾಜಕಾರಣಿಗಳ ಸ್ವಜನಪಕ್ಷಪಾತ, ಸಂಪನ್ಮೂಲಗಳ ಅಪಹರಣಗಳು ನಡೆಯುತ್ತಿವೆ. ನಿರುದ್ಯೋಗಿ ಯುವಕರು ಹಣಕ್ಕಾಗಿ ದುಷ್ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ದೇಶವನ್ನು ಮುನ್ನಡೆಸುವವರು ಯಾರು? ಅಭಿವೃದ್ಧಿಗೆ ಪರಕೀಯರ ಹಣ ಬಳಸಿ ಆರ್ಥಿಕ ಸ್ವಾತಂತ್ರ್ಯ, ಪಾಶ್ಚಾತ್ಯ ಸಂಸ್ಕೃತಿ ಬೆನ್ನು ಹತ್ತಿ ಸಾಂಸ್ಕೃತಿಕ ಸ್ವಾತಂತ್ರ್ಯ, ಇಂಗ್ಲಿಷ್ ವ್ಯಾಮೋಹದಿಂದ ಶೈಕ್ಷಣಿಕ ಸ್ವಾತಂತ್ರ್ಯ, ಮಹಿಳೆ ಮೇಲಿನ ದೌರ್ಡನ್ಯದಿಂದ ನೈತಿಕ ಸ್ವಾತಂತ್ರ್ಯ, ಜಾತಿಗಳ ನಡುವಿನ ಕಲಹದಿಂದ ಧಾರ್ಮಿಕ ಸ್ವಾತಂತ್ರ್ಯ ಕಳೆದುಕೊಂಡಿದ್ದೇವೆ. ಯಾವ ಪುರುಷಾರ್ಥಕ್ಕಾಗಿ ಸ್ವಾತಂತ್ರ್ಯ ಪಡೆದೆವು ಎಂಬ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ ಎಂದು ವಿಷಾದಿಸಿದರು.
ಪ್ರಾಚಾರ್ಯ ಎಲ್.ವಿ. ಮಾಯಾರ ಉದ್ಘಾಟಿಸಿದರು. ದತ್ತಿ ದಾನಿಗಳಾದ ಜಗದೀಶ ಮಹಾರಾಜಪೇಟ, ಬಸವರಾಜ ಮೇಲ್ಮುರಿ ಅವರನ್ನು ಸನ್ಮಾನಿಸಲಾಯಿತು. ಕಸಾಪ ತಾಲೂಕಾಧ್ಯಕ್ಷ ಮಾಲತೇಶ ಅರಳಿಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ಮಂಜುನಾಥ ಶಿರವಾಡಕರ, ಕರವೇ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ದೇವರಗುಡ್ಡ ಇದ್ದರು. ರೇಣುಕಾ ಗಾಜೇರ ಸಂಗಡಿಗರು ಪ್ರಾರ್ಥಿಸಿದರು. ಕಾರ್ಯದರ್ಶಿ ಬಿ.ಎಫ್. ದೊಡ್ಡಮನಿ ಸ್ವಾಗತಿಸಿ, ವಂದಿಸಿದರು.
--