ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗ್ರಾಮದಲ್ಲೇ ಪಡಿತರ ವಿತರಿಸಿ

Vishwanath S
Updated On : 1 Dec 2013, 12:24 pm

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 30
ಪಡಿತರ ವಿತರಣೆ ವ್ಯವಸ್ಥೆ ಬಗ್ಗೆ ಪ್ರತಿ ಬಾರಿ ಚರ್ಚೆಯಾಗಿದ್ದರೂ ಭರವಸೆಗಳಷ್ಟೇ ಸಿಗುತ್ತವೆ. ಗ್ರಾಮದಲ್ಲೇ ಪಡಿತರ ವಿತರಣೆಗೆ ವ್ಯವಸ್ಥೆ ಮಾಡಿ ಎಂದು ತಾಲೂಕಿನ ನಾಗಲಾಪುರದಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರು ಪಟ್ಟು ಹಿಡಿದರು.
ಕಳೆದ ಸರ್ಕಾರ ಅನುಷ್ಠಾನಗೊಳಿಸಿದ ಜನಸ್ಪಂದನ ಕಾರ್ಯಕ್ರಮದಿಂದ ಸರ್ಕಾರವೇ ಜನರ ಬಳಿ ಬರುತ್ತದೆ, ಸಮಸ್ಯೆಗಳ ಪರಿಹಾರವಾಗುತ್ತದೆ ಎಂದು ನಂಬಿದ್ದೆವು. ಸಮಸ್ಯೆಗಳಿಗೆ ಈವರೆಗೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಜನಸ್ಪಂದನ ನಡೆಸುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ನಾಲ್ಕು ಕಿ.ಮೀ. ದೂರದ ಕುಮ್ಮೂರಿಗೆ ತೆರಳಿ ಪಡಿತರ ತರುವುದು ಕಷ್ಟ, ಇಲ್ಲೇ ವಿತರಿಸಿ ಎಂದು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬಳಕೆದಾರರ ಸಮಖ್ಯೆ ಕಡಿಮೆಯಿದ್ದು, ಪ್ರತ್ಯೇಕ ಪಾಯಿಂಟ್ ನೀಡಲು ಸಾಧ್ಯವಿಲ್ಲ ಎಂಬ ಉತ್ತರ ಆಹಾರ ನಿರೀಕ್ಷಕ ಧೂಳಪ್ಪ ಅವರಿಂದ ಬರುತ್ತದೆ. ಆದರೆ. 70 ಪಡಿತರ ಚೀಟಿ ಇರುವ ದಾಸನಕೊಪ್ಪದಲ್ಲಿ ಹೇಗೆ ಪಡಿತರ ವಿತರಿಸುತ್ತೀರಿ? ವಿಎಸ್ಸೆಸ್ ಬ್ಯಾಂಕ್‌ನಿಂದ ಎರಡು ತಿಂಗಳಿಂದೀಚೆಗೆ ಪಡಿತರ ವಿತರಣೆ ಆಗುತ್ತಿಲ್ಲ. ಈ ಕುರಿತೂ ಸ್ಪಷ್ಟ ಉತ್ತರವಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಗ್ರಾಮದಲ್ಲಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ತಾಲೂಕಿನ 4-5 ಗ್ರಾಮಗಳಲ್ಲಿ ಈ ಸಮಸ್ಯೆ ಇದೆ. ವಿಳಂಬ ಮಾಡದೆ ಪಡಿತರ ವಿತರಿಸಿ ಎಂದು ಆಹಾರ ನಿರೀಕ್ಷಕರಿಗೆ ಸೂಚಿಸಿದರು. ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಮೇಲ್ಮಟ್ಟದ ಜಲಾಗಾರ ನಿರ್ಮಿಸುವುದಾಗಿಯೂ ಭರವಸೆ ನೀಡಿದರು. ಸ್ಮಶಾನ ರಸ್ತೆ ಅಭಿವೃದ್ಧಿಗೆ ಆದೇಶ ನೀಡಿದರು.
ಅತಿಕ್ರಮಣ ತೆರವು ಮಾಡಿ: ಗ್ರಾಮದ ಮಲ್ಲಮ್ಮನಕಟ್ಟೆ ಕೆರೆ, ಹಾದರಗಟ್ಟಿ ಕೆರೆ ಹಾಗೂ ಸ್ಮಶಾನ ರಸ್ತೆಯನ್ನು ಕೆಲವರು ಅತಿಕ್ರಮಿಸಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಹೋಗುವುದೂ ದುಸ್ತರವಾಗಿದೆ. ಕೆರೆ ಅತಿಕ್ರಮಣದಿಂದ ಮಳೆನೀರು ಕೆರೆಯಲ್ಲಿ ಸಂಗ್ರಹವಾಗುತ್ತಿಲ್ಲ. ಕೂಡಲೇ ತೆರವುಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ತಹಸೀಲ್ದಾರ್ ಶಿವಶಂಕರ ನಾಯಕ ಪ್ರತಿಕ್ರಿಯಿಸಿ, ಕೆಲವೆಡೆ ಅತಿಕ್ರಮಣ ತೆರವು ಮಾಡಿಸುತ್ತಿದ್ದೇವೆ. ನಾಗಲಾಪುರದಲ್ಲೂ ಶೀಘ್ರ ಕಾರ್ಯಾಚರಣೆ ನಡೆಸುತ್ತೇವೆ ಎಂದರು. ಗ್ರಾಮದ ಮುಖ್ಯರಸ್ತೆ ಮಧ್ಯೆ ಇರುವ ಟಿಸಿ ಸ್ಥಳಾಂತರಿಸಲು, ನಿರಂತರ ಆರು ತಾಸು ವಿದ್ಯುತ್ ಪೂರೈಸಲು ಗ್ರಾಮಸ್ಥರು ಮನವಿ ಮಾಡಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಗೀತಾ ಹರಿಜನ, ನಾಗನಗೌಡ್ರ ಪಾಟೀಲ, ಜಗದೀಶ ಪೂಜಾರ, ಮಾರುತಿ ಅಚ್ಚಿಗೇರಿ, ಅಯೂಬ್ ಖಾನ ಮಲ್ಲೂರ, ಮುನ್ನಾ ಯಲಿಗಾರ, ಅಧಿಕಾರಿಗಳಾದ ನಟರಾಜ್, ಚಿದಾನಂದ, ಎಂ. ಅಣ್ಣಪ್ಪ, ಬಿ.ಪಿ. ಅಜಗಣ್ಣನವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement