ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸತ್ತಾಗಲ್ಲ, ಈಗ್ಲೇ ಪರಿಹಾರ ಕೊಡಿ

Vishwanath S
Updated On : 1 Dec 2013, 12:24 pm

ಶಿಗ್ಗಾಂವಿ: ರೈತರು ಸತ್ತ ಮೇಲೆ ಪರಿಹಾರ ಬೇಕಿಲ್ಲ. ಕಳಪೆ ಬೀಜದಿಂದ ಹಾನಿಯಾಗಿದೆ ಎಂದು ವರದಿ ಬಂದ ಮೇಲೆ ಪರಿಹಾರ ನೀಡುವ ಜವಾಬ್ದಾರಿ ಕೃಷಿ ಇಲಾಖೆಯದ್ದು. ಕೂಡಲೇ ಪರಿಹಾರ ಕೊಡಿ ಎಂದು ತಾಪಂ ಸದಸ್ಯ ತಿಪ್ಪಣ್ಣ ಸಾತಣ್ಣವರ ಗುಡುಗಿದರು.
ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಾತಣ್ಣವರ, ಕನಕ ಬಿಟಿ ಹತ್ತಿ ಬೀಜ ಬಿತ್ತಿದ ರೈತರು ಅನುಭವಿಸುತ್ತಿರುವ ಬವಣೆಯನ್ನು ಬಣ್ಣಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಿ. ಬಸವರಾಜ ಮಾತನಾಡಿ, ಕಳಪೆ ಬೀಜದಿಂದ ನಷ್ಟವಾಗಿದೆ ಎಂದು ವಿಜ್ಞಾನಿಗಳ ತನಿಖಾ ವರದಿ ತಿಳಿಸಿದೆ. ನ. 30ರ ವರೆಗೂ ಸಮೀಕ್ಷೆ ನಡೆಯುತ್ತದೆ. ಪರಿಹಾರಕ್ಕಾಗಿ ರೈತರಿಂದ 11,614 ಅರ್ಜಿ ಬಂದಿವೆ. ಜಿಲ್ಲಾ ಕೃಷಿ ಜಂಟಿ ಸಹಾಯಕ ನಿರ್ದೇಶಕರಿಗೆ ನಾಲ್ಕು ಬಾರಿ ಪತ್ರ ಬರೆಯಲಾಗಿದೆ. ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯರ ನಿಯೋಗ ಜಿಲ್ಲಾಧಿಕಾರಿಗಳ ಗಮನ ಸೆಳೆಯವಂತೆ ಮನವಿ ಮಾಡಿದರು.
ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ನೀಡಲು ಸರ್ಕಾರ ಬಯೋವುಟ್ರಿಕ್ ಯಂತ್ರ ನೀಡಿದೆ. ಆದರೆ, ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ರು. 20 ಶುಲ್ಕ ಪಡೆಯುತ್ತಿದ್ದಾರೆ. ಹಣ ವಸೂಲಿ ನಿಲ್ಲಿಸಿ ಎಂದು ತಿಪ್ಪಣ್ಣ ತಾಕೀತು ಮಾಡಿದರು.
ಚಿಕಿತ್ಸೆಗೆ ದರಪಟ್ಟಿ!: ಹಿರೇಬೆಂಡಿಗೇರಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಪ್ರತಿ ಚಿಕಿತ್ಸೆಗೂ ದರಪಟ್ಟಿ ಹಾಕಿದ್ದಾರೆ. ಹಣ ಕೊಡದಿದ್ದರೆ ಚಿಕಿತ್ಸೆ ಇಲ್ಲ. ಸಿಬ್ಬಂದಿ ಮೇಲೆ ಕ್ರಮಕ್ಕೆ ಕಳೆದ ಸಭೆಗಳಲ್ಲಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಅವರನ್ನು ವರ್ಗಾಯಿಸಿ ಎಂದು ಆರೋಗ್ಯಾಧಿಕಾರಿಗಳಿಗೆ ಸಲಹೆ ನೀಡಿದರು. ಎಚ್ಚರಿಸಿದರೂ ಸಿಬ್ಬಂದಿ ಹಣ ವಸೂಲಿ ಚಾಳಿ ಬಿಡುತ್ತಿಲ್ಲ. ಕಾನೂನು ಕ್ರಮ ಕೈಗೊಳ್ಳುವುದಾಗಿ ಡಾ೤ ಮದನ ಘೋಡಕೆ ತಿಳಿಸಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಜನತೆ ನಮ್ಮನ್ನು ಶಪಿಸುತ್ತಾರೆ ಎಂದು ಸದಸ್ಯರಾದ ಮುತ್ತಣ್ಣ ಪಾಟೀಲ, ತಿಪ್ಪಣ್ಣ ಸಾತಣ್ಣನವರ ದೂರಿದರು. ಅಧಿಕಾರಿಗಳ ವಿರುದ್ಧ ನಿರ್ಣಯ ಕೈಗೊಂಡು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಳುಹಿಸುವಂತೆ ತಾಕೀತು ಮಾಡಿದರು. 2011-12ನೇ ಸಾಲಿನಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಬೇಕಿದ್ದ ತಾಡಪತ್ರಿ ತಮಗೆ ಬೇಕಾದವರಿಗೆ ವಿತರಿಸಲಾಗಿದೆ. ಈ ಸಲ ಹಾಗಾಗಬಾರದು ಎಂದರು. ತಾಪಂ ಸಭೆಗಳಿಗೆ ಗೈರಾಗುತ್ತಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ಎಂದು ಅಧ್ಯಕ್ಷೆ ಸುಜಾತಾ ಕಲಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ಸಭೆಗೆ ಬಾರದ ಅಧಿಕಾರಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ರವಾನಿಸಿದರು.
ಉಪಾಧ್ಯಕ್ಷ ನಿಂಗಪ್ಪ ಹರಿಜನ, ಸದಸ್ಯರಾದ ನಿಂಗಪ್ಪ ಜವಳಿ, ವೀರನಗೌಡ್ರ ಪಾಟೀಲ, ಉಷಾ ಬಿಳಿಕುದರಿ, ಉಮಾ ಡವಗಿ, ಗೀತಾ ಹಂಚಿನಮನಿ, ಶಾಂತಮ್ಮ ಬೊಮ್ಮನಹಳ್ಳಿ, ಫರೀದಾಬಾನು ಶೇಖಸನದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement