ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹೋರಾಟ ಸ್ಫೂರ್ತಿ: ಸಲೀಂ

Vishwanath S
Updated On : 1 Dec 2013, 12:24 pm

ಕನ್ನಡಪ್ರಭ ವಾರ್ತೆ, ಹಾವೇರಿ, ನ. 30
ದೇಶದ ವಿವಿಧ ರಾಜ್ಯಗಳಿಂದ ಅಲ್ಲಿಗೆ ಬಂದ ಯುವತಿಯರು ಕ್ರೀಡೆಯಲ್ಲಿ ತೋರಿದ ಹೋರಾಟದ ಮನೋಭಾವ ದೇಶಕ್ಕೆ ತಲುಪುವಂತಾಗಿದೆ. ಇದು ದೇಶದ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಲಿದೆ ಎಂದು ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆ ಮಹಾನಿರ್ದೇಶಕ ಸಲೀಂ ಅಹಮದ್ ಹೇಳಿದರು.
ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯ, ಪೈಕಾ ನಿರ್ದೇಶನಾಲಯ ದೆಹಲಿ, ಭಾರತೀಯ ಕ್ರೀಡಾ ಪ್ರಾಧಿಕಾರ, ಪೈಕಾ ಯೋಜನೆ, ಜಿಲ್ಲಾಡಳಿತ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಜಿಪಂ, ನಗರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅವುಗಳ ಆಶ್ರಯದಲ್ಲಿ ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 39ನೇ ರಾಷ್ಟ್ರಮಟ್ಟದ ಮಹಿಳಾ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ದೇಶದ 19 ರಾಜ್ಯಗಳಿಂದ ಬಂದ ಯುವತಿಯರು ಇಲ್ಲಿ ಕ್ರೀಡಾಸ್ಫೂರ್ತಿಯಿಂದ ಆಡಿ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಅಲ್ಲದೇ ಇಂಥ ಕ್ರೀಡಾಕೂಟ ಕೋಮು ಸೌಹಾರ್ದತೆ ಕಾಪಾಡಲು ಸಹಕಾರಿಯಾಗಿದೆ. ಗ್ರಾಮೀಣ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಇಂದು ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಆದರೂ ದೇಶದ ನಾನಾ ಭಾಗಗಳಿಂದ ಯುವತಿಯರು ಇಲ್ಲಿ ಬಂದು ಕ್ರೀಡೆಯಲ್ಲಿ ಪಾಲ್ಗೊಂಡು ಮಾದರಿಯಾಗಿದ್ದಾರೆ ಎಂದು ಹೇಳಿದರು.
ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ನಾಲ್ಕು ದಿನಗಳಿಂದ ಇಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಜನರ ಸಹಕಾರವೇ ಕಾರಣ. ರಾಷ್ಟ್ರಮಟ್ಟದ ಕ್ರೀಡಾಕೂಟ ಸಂಘಟಿಸುವಾಗ ಇದ್ದ ಅನುಮಾನಗಳಿಗೆ ತೆರೆ ಬಿದ್ದಿದೆ. ಕ್ರೀಡಾಕೂಟದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪಥ ಸಂಚಲನ: ಮಣಿಪುರ ಪ್ರಥಮ
ಅಚ್ಚುಕಟ್ಟಾಗಿ ಹಾಗೂ ಯಾವುದೇ ತೊಂದರೆಯಾಗದಂತೆ ಕ್ರೀಡಾಕೂಟ ಸಂಘಟಿಸಿದ ಬಗ್ಗೆ ಕ್ರೀಡಾಪಟುಗಳು ಅನಿಸಿಕೆ ವ್ಯಕ್ತಪಡಿಸಿದರು. ಅನಂತರ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಅಲ್ಲದೇ ಕ್ರೀಡಾಕೂಟದ ಆರಂಭದಲ್ಲಿ ನಡೆಸಿದ ಪಥಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಣಿಪುರ ತಂಡಕ್ಕೆ ಪ್ರಥಮ ಹಾಗೂ ಹಿಮಾಚಲ ಪ್ರದೇಶ ತಂಡಕ್ಕೆ ದ್ವಿತೀಯ ಬಹುಮಾನ ನೀಡಲಾಯಿತು.
ನಗರಸಭೆ ಅಧ್ಯಕ್ಷ ಐ.ಯು. ಪಠಾಣ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಪಂ ಸಿಇಒ ಕೆ.ಬಿ. ಆಂಜನಪ್ಪ, ಎಸ್ಪಿ ಎಸ್.ಡಿ. ಜಗಮೈನವರ, ಎಡಿಸಿ ಶಶಿಧರ ಕುರೇರ, ಪ್ರಮುಖರಾದ ಕೊಟ್ರೇಶ ಬಸೆಗಣ್ಣನವರ ಇತರರು ಇದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಎಂ.ಸಿ. ರಮೇಶ ಸ್ವಾಗತಿಸಿದರು. ನಾಗರಾಜ ಇಚ್ಚಂಗಿ ವಂದಿಸಿದರು.
ಕ್ರೀಡಾ ರಸದೌತಣ
ಹಾವೇರಿ: ನಾಲ್ಕು ದಿನ ನಡೆದ ರಾಷ್ಟ್ರ ಮಟ್ಟದ ಮಹಿಳಾ ಕ್ರೀಡಾಕೂಟ ಕ್ರೀಡಾಪ್ರೇಮಿಗಳಿಗೆ ರಸದೌತಣ ಬಡಿಸಿತು. ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆದ ಕಬಡ್ಡಿ, ಖೋಖೋ ಹಾಗೂ ವಾಲಿಬಾಲ್ ಪಂದ್ಯಗಳು ಜಿಲ್ಲೆಯ ಕ್ರೀಡಾಪ್ರೇಮಿಗಳನ್ನು ಸೆಳೆದವು. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಎಲ್ಲ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದವು. ಕ್ರೀಡಾಪಟುಗಳಿಗೆ ಊಟ, ವಸತಿ ಸೌಲಭ್ಯ ನೀಡುವಲ್ಲಿ ಕೊರತೆ ಕಂಡುಬರಲಿಲ್ಲ. ಸ್ಥಳೀಯರ ಸಹಕಾರವೂ ಕ್ರೀಡಾಕೂಟದ ಯಶಸ್ಸಿಗೆ ಕಾರಣವಾಯಿತು. ಪಂದ್ಯ ನೋಡಲು ಬರುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ರಾಜ್ಯ, ಭಾಷೆಗಳನ್ನು ನೋಡದೆ ಎಲ್ಲರಿಗೂ ಪ್ರೋತ್ಸಾಹ ನೀಡುವ ಮೂಲಕ ಪ್ರೇಕ್ಷಕರೂ ಕ್ರೀಡಾಸ್ಫೂರ್ತಿ ಪ್ರದರ್ಶಿಸಿದರು. ರಾತ್ರಿವರೆಗೂ ಪ್ರೇಕ್ಷಕರ ಸಂಖ್ಯೆ ಕರಗುತ್ತಿರಲಿಲ್ಲ. ಇದು ಆಟಗಾರರಿಗೆ ಮತ್ತಷ್ಟು ಹುರುಪು ತಂದು ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಯಿತು.
ಭಲೇ! ಭೇಷ್!
ಹಾವೇರಿಯಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಹಮ್ಮಿಕೊಂಡ ಸಂಘಟಕರಿಗೆ ಬೇಷ್ ಎನ್ನಲೇಬೇಕು. ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ನೇತೃತ್ವದಲ್ಲಿ ಎಲ್ಲ ಅಧಿಕಾರಿಗಳು ನಾಲ್ಕು ದಿನ ಸ್ಥಳದಲ್ಲೇ ಇದ್ದು ಶ್ರಮಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಜುಬೇರ್, ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ, ಎಎಸ್ಪಿ ಜಗಮೈನವರ ನೇತೃತ್ವದಲ್ಲಿ ಪೊಲೀಸರು ಒದಗಿಸಿದ ಭದ್ರತೆಯೂ ಶ್ಲಾಘನೀಯ. ತುರ್ತು ಚಿಕಿತ್ಸೆ ನೀಡಿದ ಆರೋಗ್ಯ ಇಲಾಖೆ, ಸಹಕಾರ ನೀಡಿದ ನಗರಸಭೆ, ಅಗ್ನಿಶಾಮಕ ಸಿಬ್ಬಂದಿ, ಅಂಬ್ಯುಲೆನ್ಸ್, ಸ್ವಯಂ ಸೇವಕರಿಗೆ ಕ್ರೆಡಿಟ್ ಸೇರಬೇಕು. ಈ ಯಶಸ್ಸು ಜಿಲ್ಲೆಯಲ್ಲಿ ಇನ್ನಷ್ಟು ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲು ಸಹಕಾರಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement