ಅಮೃತಂ ಆಸ್ಪತ್ರೆಯಲ್ಲಿ ಆಯುರ್ವೇದ ಶಿಬಿರ
ರಾಣಿಬೆನ್ನೂರು: ನಾಲ್ಕು ವರ್ಷಗಳಿಂದ ಅಮೃತಂ ಆಯುರ್ವೇದ ಆಸ್ಪತ್ರೆಯಲ್ಲಿ ಲಕ್ಷಾಂತರ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆಸ್ಪತ್ರೆ ಹೆಸರು ಹಾವೇರಿ ಜಿಲ್ಲೆಯಲ್ಲಿ ಮನೆ ಮಾತಾಗಿದೆ ಎಂದು ಡಾ. ನಾರಾಯಣ ಪವಾರ ತಿಳಿಸಿದರು.
ಎಂ.ಕೆ. ಪವಾರ ಮೆಮೋರಿಯಲ್ ಸೊಸೈಟಿ, ಅಮೃತಂ ಆಯುರ್ವೇದ ಆಸ್ಪತ್ರೆ ಮತ್ತು ಪಂಚಕರ್ಮ ಕೇಂದ್ರದ ಆಶ್ರಯದಲ್ಲಿ ಆಸ್ಪತ್ರೆಯ 4ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಮಾನ್ವಿ ಕಂಪನಿ ರಸ್ತೆಯಲ್ಲಿರುವ ಆಸ್ಪತ್ರೆಯ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ಆಸ್ಪತ್ರೆಯಲ್ಲಿ ಮೂಲವ್ಯಾಧಿ, ಸಂಧಿವಾತ, ಬೊಜ್ಜು, ಮಧುಮೇಹ, ಪಾರ್ಶ್ವವಾಯು, ಅಸ್ತಮಾ, ತಲೆಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ವಾರ್ಷಿಕೋತ್ಸವ ಉದ್ಘಾಟಿಸಿದ ಸಿಪಿಐ ಲೋಕೇಶ್ ಮಾತನಾಡಿ, ಎಲ್ಲರೂ ಆಯುರ್ವೇದ ಮಹತ್ವ ಅರಿಯಬೇಕು ಎಂದರು.
ಹಿರೇಕೆರೂರು, ಬ್ಯಾಡಗಿ, ಹಾನಗಲ್ಲ, ಹಾವೇರಿ, ಪಕ್ಕದ ದಾವಣಗೆರೆ, ಹರಿಹರ, ಶಿಕಾರಿಪುರ ತಾಲೂಕುಗಳಿಂದ ಬಂದಿದ್ದ ಸುಮಾರು 420 ರೋಗಿಗಳಿಗೆ ಡಾ. ಶಿವಾನಂದ ಎ. ಕೆಂಬಾವಿ, ಡಾ. ರವಿ ಮಡಿವಾಳರ ಚಿಕಿತ್ಸೆ ನೀಡಿದರು.
ಎಂ.ಕೆ. ಪವಾರ ಮೆಮೋರಿಯಲ್ ಸೊಸೈಟಿಯ ಕಾರ್ಯದರ್ಶಿ ನಾಗೇಂದ್ರಸಾ ಪವಾರ ಇದ್ದರು.