ಜಾನುವಾರು ಸಂತೆ ರದ್ದು
ಹಿರೇಕೆರೂರು: ತಾಲೂಕಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಕಂಡುಬಂದಿದ್ದು, ಹಂಸಬಾವಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ಜರುಗುತ್ತಿದ್ದ ಜಾನುವಾರು ಮಾರುಕಟ್ಟೆ, ಜಾನುವಾರು ಸಂತೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪಿ. ರಾಮಪ್ಪ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಅ. 23ರಿಂದ ನ. 15ರ ವರೆಗೆ ಜಾನುವಾರು ಸಂತೆ ನಡೆಸುವಂತಿಲ್ಲ. ರೈತ ಬಾಂಧವರು, ಸಾರ್ವಜನಿಕರು ಹಾಗೂ ಜಾನುವಾರು ಖರೀದಿದಾರರು ಸಹಕರಿಸಬೇಕೆಂದು ಎಪಿಎಂಸಿ ಅಧ್ಯಕ್ಷ ಪರ್ವತಪ್ಪ ಶಿ. ಅಜಗೋಳ ಮನವಿ ಮಾಡಿದ್ದಾರೆ.
ಅರ್ಜಿ ಅವಧಿ ವಿಸ್ತರಣೆ
ಹಾವೇರಿ: ಪ್ರಸಕ್ತ ಸಾಲಿಗಾಗಿ ಪರಿಶಿಷ್ಟ ವರ್ಗಕ್ಕೆ ಸೇರಿದ ನಾಲ್ವರು ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ನಾಲ್ಕು ವರ್ಷ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅ. 21 ಕೊನೆಯ ದಿನವಾಗಿತ್ತು. ಆದರೆ. ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಬಾರದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ಅವಧಿಯಲ್ಲಿ ಅ. 31ರ ವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ಗರಿಷ್ಠ 35 ವರ್ಷ ಮೀರದ ಅಭ್ಯರ್ಥಿಘಳಿಗೆ ಜಿಲ್ಲಾ ಸರ್ಕಾರಿ ಅಭಿಯೋಜಕರು, ಸರ್ಕಾರಿ ವಕೀಲರು ಅಥವಾ 20ಕ್ಕೂ ಹೆಚ್ಚು ವರ್ಷ ಅನುಭವವಿರುವ ಖಾಸಗಿ ವಕೀಲರ ಬಳಿ ತರಬೇತಿಗೆ ನಿಯೋಜಿಸಲಾಗುವುದು. ತರಬೇತಿ ಅವಧಿಯಲ್ಲಿ ಮಾಸಿಕ ರು. 2000 ಶಿಷ್ಯವೇತನ ನೀಡಲಾಗುವುದು. ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ, ಆದಾಯ, ಜಾತಿ ಪ್ರಮಾಣಪತ್ರ, ಜನ್ಮ ದಾಖಲೆ ಮತ್ತು ಬಾರ್ ಅಸೋಸಿಯೇಶನಲ್ಲಿ ಸದಸ್ಯತ್ವ ಪಡೆದ ದೃಢೀಕರಣ ಪ್ರಮಾಣತ್ರ, ಕಾನೂನು ಪದವಿಯ ಅಂಕಪಟ್ಟಿ ಜತೆಗೆ ಅ. 31ರೊಳಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಎಲ್‌ಐಸಿ ಎದುರಿಗೆ, ನೀಲನಗೌಡ್ರ ಕಾಂಪ್ಲೆಕ್ಸ್, ಪಿ.ಬಿ. ರಸ್ತೆ, ಹಾವೇರಿ (ದೂ. 08375-232032) ಇವರಿಗೆ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.
27ರಂದು ಕೃತಿ ಬಿಡುಗಡೆ
ಬ್ಯಾಡಗಿ: ಪಟ್ಟಣದ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾ ಭವನದಲ್ಲಿ ಅ. 27ರಂದು ಬೆಳಗ್ಗೆ 10.30ಕ್ಕೆ ಬಸವೇಶ್ವರ ಜಯಂತಿ ಶತಮಾನೋತ್ಸವ ಸವಿನೆನಪಿಗಾಗಿ ವಚನಕಾರ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಅಪ್ರತಿಮ ಚೇತನ ಭಾಗ-2 ಹಾಗೂ ನುಡಿ ಜೇನು ಕೃತಿಗಳ ಬಿಡುಗಡೆ ಸಮಾರಂಭ ನಡೆಯಲಿದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹುಬ್ಬಳ್ಳಿಯ ಬಸವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಬಸವರಾಜ ಶಿವಣ್ಣನವರ, ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷ ಡಾ. ಬಿ.ವಿ. ಶಿರೂರ, ಸಾಹಿತಿಗಳಾದ ಡಾ. ಸಂಗಮೇಶ ಹಂಡಗಿ, ಎಂ.ಡಿ. ಗೋಗೇರಿ, ಪ್ರಾಚಾರ್ಯ ವಿ.ಎಸ್. ಬೆಂಚಳ್ಳಿ ಅತಿಥಿಗಳಾಗಿ ಪಾಲ್ಗೊಳ್ಳುವರೆಂದು ತಾಲೂಕಾಧ್ಯಕ್ಷ ಮಾಲತೇಶ ಅರಳಿಮಟ್ಟಿ ತಿಳಿಸಿದ್ದಾರೆ.