ಭ್ರೂಣಹತ್ಯೆ ತಡೆಗೆ ಕಠಿಣ ಕಾನೂನು: ಕುರವಳ್ಳಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಅ. 23
ಹೆಣ್ಣು ಮಗು ಎಂದಾಕ್ಷಣ ಗರ್ಭಿಣಿಯರು ಗರ್ಭಪಾತಕ್ಕೆ ಮುಂದಾದರೆ, ದೇವರೇ ಬಂದರೂ ಹೆಣ್ಣು ಭ್ರೂಣಹತ್ಯೆ ನಿಲ್ಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ಕಠಿಣ ಕಾನೂನು ಅವಶ್ಯ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಫ್. ಕುರವಳ್ಳಿ ಹೇಳಿದರು.
ಬುಧವಾರ ಸ್ಥಳೀಯ ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ಏರ್ಪಡಿಸಿದ್ದ ಪ್ರಸವಪೂರ್ವ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ನಿಗ್ರಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಜಗತ್ತು ಸೃಷ್ಟಿಯಾಗಿದ್ದೇ ಒಂದು ಗಂಡು ಮತ್ತು ಹೆಣ್ಣಿನಿಂದ. ಜಗತ್ತು ಮುಂದುವರಿಯಲೂ ಈ ಇಬ್ಬರ ಅಗತ್ಯವಿದೆ. ಗರ್ಭಾವಸ್ಥೆಯಲ್ಲೇ ಲಿಂಗ ಪತ್ತೆ ಮಾಡಿಸಿಕೊಂಡು, ಹೆಣ್ಣು ಭ್ರೂಣವಿದ್ದಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗುತ್ತಿರುವುದು ದುರಂತ. ಭ್ರೂಣಹತ್ಯೆ ಮಹಾಪಾಪ ಎಂದು ಪುರಾಣಗಳಲ್ಲೂ ಉಲ್ಲೇಖಿಸಲಾಗಿದೆ. ಆದರೂ ಭ್ರೂಣಹತ್ಯೆ ಆಗುತ್ತಿರುವುದು ಖೇದನೀಯ ಎಂದರು.
ಸಮಾಜದಲ್ಲಿ ಲಿಂಗ ತಾರತಮ್ಯ ಇಂದಿಗೂ ಜೀವಂತವಾಗಿದೆ. ಇದರಿಂದ ಏನು ಸಂದೇಶ ಸಿಗುತ್ತದೆ? ಎಲ್ಲರೂ ವಿದ್ಯಾವಂತರಾದಾಗ ಮಾತ್ರ ಹೆಣ್ಣು ಭ್ರೂಹ ಹತ್ಯೆ ತಡೆಯಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಪ್ರೀತಿ ಏಕಿಲ್ಲ?
ತಾಲೂಕು ಆರೋಗ್ಯಾಧಿಕಾರಿ ಡಾ ಬಿ.ಆರ್. ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ, ಗಂಡು ಮಗು ಜನಿಸಿದರೆ ಸಂತೋಷ ಪಡುವ ಜನರು ಹೆಣ್ಣ ಮಗುವಿನ ಮೇಲೇಕೆ ಪ್ರೀತಿ, ಗೌರವ, ಆದರ ತೋರುತ್ತಿಲ್ಲ? 2001ರಲ್ಲಿ ಸಾವಿರ ಪುರುಷರಿಗೆ 942 ಮಹಿಳೆಯರಿದ್ದರೆ, 2011ರ ವೇಳೆಗೆ 968ರಷ್ಟಿದ್ದಾರೆ ಎಂದರು.
ನ್ಯಾಯವಾದಿ ಎಂ.ಎ. ಅಗಸರ ಭ್ರೂಣಹತ್ಯೆ ನಿಷೇಧ ಕಾನೂನಿನ ಕುರಿತು ಉಪನ್ಯಾಸ ನೀಡಿ, ಕಿತ್ತು ತಿನ್ನುವ ಬಡತನ ಹಾಗೂ ಇನ್ನೂ ಜೀವಂತವಾಗಿರುವ ವರದಕ್ಷಿಣೆ ಬಹುಶಃ ಹೆಣ್ಣು ಭ್ರೂಣಹತ್ಯೆಗೆ ಕಾರಣ. ಸರ್ಕಾರ ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನಕ್ಕೆ ನಿಷೇಧ ಹೇರಿದೆ. ಲಿಂಗ ಪತ್ತೆ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ಹೆಣ್ಣು ಭ್ರೂಣಹತ್ಯೆಯ ಪ್ರಮಾಣ ಕಡಿಮೆಯಾಗಿದೆ. ವಿದ್ಯಾವಂತರು ಹೆಣ್ಣು ಭ್ರೂಣ ಹತ್ಯೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಲು ಶ್ರಮಿಸಬೇಕು ಎಂದರು.
ಡಾ ಚಂದ್ರಶೇಖರ ಲಮಾಣಿ, ರೂಪಶ್ರೀ ಬಣಕಾರ, ಎಸ್.ಡಿ. ಕೆಳಗಿನಮನಿ ಇದ್ದರು. ವೈ.ಎಂ. ಹಿರಿಯಕ್ಕನವರ ಸ್ವಾಗತಿಸಿದರು. ಕೆ.ಎನ್. ಸುರೇಖಾ ವಂದಿಸಿದರು.