ಸೋರುವ ಹಾಸ್ಟೆಲ್: ಎಸ್ಸೆಫ್ಐ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಅ. 23
ಮಳೆ ಬಂದ್ರ ಕಟ್ಟಡ ಸೋರತೈತ್ರಿ. ಮಳಿ ನೀರೆಲ್ಲ ನಾವು ಮಲಗೂ ರೂಮ್ನ್ಯಾಗರೀ. ಕುಡಿಯಾಕ ಸರಿಯಾಗಿ ನೀರಿಲ್ಲಾರಿ. ನೀರಿನ ವ್ಯವಸ್ಥೆನೂ ಇಲ್ರೀ. ಹಾಸ್ಟೆಲನ್ಯಾಗ 45ರಿಂದ 50 ಹುಡುಗರ ಅದಾವ್ರೀ. ತಿಂಗಳದಾಗ ನಾಲ್ಕರಿಂದ ಐದು ಟ್ಯಾಂಕರ್ ನೀರು ಹಾಕ್ತಾರಿ, ನೀರು ಖಾಲಿ ಆಗಿ ಎರಡ್ಮೂರು ದಿನಕ್ಕೆ ತರಸ್ತಾರ್ರೀ. - ಪಟ್ಟಣದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳ ಗೋಳು ಇದು.
ಬುಧವಾರ ಸಂಜೆ ಸುರಿದ ಮಳೆಯಿಂದ ನೀರು ಸೋರಿ ವಿದ್ಯಾರ್ಥಿಗಳು ಮಲಗುವ ಕೋಣೆ ಹಾಗೂ ಅಡುಗೆ ಕೋಣೆಯಲ್ಲಿ ನೀರು ತುಂಬಿದ್ದರಿಂದ ವಿದ್ಯಾರ್ಥಿಗಳು ಪರದಾಡಿದರು. ಇದನ್ನು ಗಮನಿಸಿದ ಎಸ್ಎಫ್ಐ ತಾಲೂಕು ಅಧ್ಯಕ್ಷ ಸುಭಾಸ ಮಾದರ ನೇತೃತ್ವದಲ್ಲಿ ಕಾರ್ಯಕರ್ತರು ಸಮಾಜ ಕಲ್ಯಾಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಹಾಸ್ಟೆಲ್ ಸ್ಥಳಾಂತರಿಸಿ
ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ, ವಸತಿ ನಿಲಯವನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಿ. ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ನೀಡಬೇಕು. ವಿದ್ಯಾರ್ಥಿ ನಿಲಯ ಸ್ಥಳಾಂತರಿಸುವಂತೆ ಸೆ. 25ರಂದೇ ಸಮಾಜ ಕಲ್ಯಾಣಾಧಿಕಾರಿಗೆ ಮನವಿ ಮಾಡಲಾಗಿತ್ತು. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ತೋರಿ, ವಿದ್ಯಾರ್ಥಿಗಳನ್ನು ಬೀದಿಗೆ ಎಳೆದಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದಿಂದ ಬರುವ ಯಾವುದೇ ಸೌಲಭ್ಯಗಳು ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ. ಸ್ವಚ್ಛತೆ ಇಲ್ಲದೆ ವಿದ್ಯಾರ್ಥಿ ನಿಲಯವು ಸೊಳ್ಳೆಗಳ ತಾಣವಾಗಿದೆ. ಗೋದಿ, ಅಕ್ಕಿಯಲ್ಲಿ ನುಸಿಗಳು ಹರಿದಾಡುತ್ತವೆ, ಶೌಚಾಲಯಗಳು ನೀರಿಲ್ಲದೆ ದುರ್ನಾತ ಬೀರುತ್ತಿವೆ. ಸರಿಯಾದ ವಿದ್ಯುತ್ ಸಂಪರ್ಕವೂ ಇಲ್ಲ ಎಂದು ವಿದ್ಯಾರ್ಥಿಗಳು ವಿವರಿಸಿದರು.
ವಸತಿ ನಿಲಯದ ವಿದ್ಯಾರ್ಥಿಗಳಾದ ಈರಣ್ಣ ಚೆಟ್ಟಿ, ವಿನೋದ ಲಮಾಣಿ, ಪ್ರಕಾಶ ಲಮಾಣಿ, ರಮೇಶ ಲಮಾಣಿ, ಮಾಲತೇಶ ಲಮಾಣಿ, ಸುನೀಲ ಲಮಾಣಿ, ಬಸವರಾಜ ಅಕ್ಕಸಾಲಿ, ಸಂಜಯ ಅಕ್ಕಸಾಲಿ, ರಾಜು ಲಮಾಣಿ, ಮಂಜು ಹರಿಸನ, ಫಕ್ಕಿರೇಶ ವಡ್ಡರ, ಮಹೇಶ ಗುಬ್ಬಿ, ಸುರೇಶ ಅಕ್ಕಸಾಲಿ, ಅರ್ಜುನ ರಾಥೋಡ, ಸಂತೋಷ ದೇವರಮನಿ ಮುಂತಾದವರಿದ್ದರು.