ಒತ್ತುವರಿ ತೆರವು: ಗಾಂಧಿ ಟೋಪಿ ಧರಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ , ಸಕಲೇಶಪುರ , ಅ.24
ಗೋಮಾಳ, ಸ್ಮಶಾನ, ಕೆರೆ ಭೂಮಿಯನ್ನು ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಮಳಲಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಗಾಂಧಿ ಟೋಪಿ ಧರಿಸಿ ಪಟ್ಟಣದ ಮಿನಿವಿಧಾನ ಸೌಧದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಮಳಲಿ ಗ್ರಾಪಂ ವ್ಯಾಪ್ತಿಯ ಮಠಸಾಗರ, ಕೊಲ್ಲಹಳ್ಳಿ, ಮಳಲಿ, ಕಬ್ಬಿನಗದ್ದೆ ಗ್ರಾಮಗಳಲ್ಲಿ ಸುಮಾರು 70 ಎಕರೆಗೂ ಹೆಚ್ಚಿನ ಗ್ರಾಮಠಾಣಾ, ಗೋಮಾಳ, ಸ್ಮಶಾನ ಭೂಮಿ ಹಾಗೂ ಕೆರೆಗಳನ್ನು ಒತ್ತುವರಿಮಾಡಲಾಗಿದ್ದು ಗ್ರಾಪಂಯ ಸರ್ಕಾರ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರಿ ಭೂಮಿ ಇಲ್ಲದಾಗಿದೆ ಆದ್ದರಿಂದ ಈ ಬಗ್ಗೆ ಕಳೆದ ಹಲವು ವರ್ಷಗಳ ಹಿಂದೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಒತ್ತುವರಿ ಭೂಮಿ ತೆರವು ಕಾರ್ಯ ನಡೆಸಲು ನಿರ್ಣಯ ಕೈಗೊಳ್ಳಲಾಗಿದ್ದು ತಾಲೂಕು ಕಚೇರಿಗೆ ಮನವಿ ನೀಡಲಾಗಿದೆ.
ಆದರೂ ಇದುವರಗೆ ತಾಲೂಕು ಆಡಳಿತ ಯಾವುದೆ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಆದ್ದರಿಂದ ಗ್ರಾಮಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸುವವರಗೆ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕಾಮಿಸಿದ ತಹಸಿಲ್ದಾರ್ ಪಾರ್ವತಿ, ಇನ್ನೂ 15 ದಿನಗಳಲ್ಲಿ ಒತ್ತುವರಿ ಭೂಮಿಯನ್ನು ತೆರವುಗೊಳಿಸಲಾಗುವುದು ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದೆ ಪಡೆಯಲಾಯಿತು. ಪ್ರತಿಭಟನೆಗೂ ಮುನ್ನ ಪಟ್ಟಣದ ಗುಹೇಕಲ್ಲಮ್ಮ ದೇವಸ್ಥಾನದಿಂದ ಪ್ರತಿಭಟನ ಮೆರವಣಿಗೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವವನ್ನು ಮಳಲಿ ಗ್ರಾಪಂ ಅಧ್ಯಕ್ಷ ರಘು, ಎಪಿಎಂಸಿ ಸದಸ್ಯ ಸಲೀಂ, ಗ್ರಾಪಂ ಸದಸ್ಯರಾದ ಸುನಿಲ್, ಚಂದ್ರಶೇಖರ್, ಮುಖಂಡ ಈಶ್ವರ್ ಆಳ್ವ ವಹಿಸಿದರು.