ಕೋಡ ಕೆರೆಯಲ್ಲಿ ಕೊಡ ನೀರಿಲ್ಲ!
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಅ. 24
ಸಾಕಷ್ಟು ಮಳೆಯಾಗಿದ್ದರೂ ತಾಲೂಕಿನ ಬಹುತೇಕ ಕೆರೆಗಳು ತುಂಬದೆ, ಜನರಲ್ಲಿ ಆತಂಕ ಮೂಡಿಸಿದೆ.
ಕೋಡ ಗ್ರಾಮದ ಬಹು ದೊಡ್ಡ ಕೆರೆ ಖಾಲಿಯಾಗಿಯೇ ಉಳಿದಿರುವುದರಿಂದ ಈ ಭಾಗದ ಜನತೆಗೆ ನೀರಿನ ತೀವ್ರ ಅಡಚಣೆ ಉಂಟಾಗಿದೆ.
ಐತಿಹಾಸಿಕ ಕೆರೆ ನಾಲ್ಕು ವರ್ಷಗಳಿಂದ ತುಂಬಿಯೇ ಇಲ್ಲ. ಕೆರೆ ಅಂಗಳದಲ್ಲಿ ಹುಟ್ಟಿರುವ ಹಸಿರು ಹುಲ್ಲನ್ನು ಮೇಯಲು ದನ ಕರುಗಳು ಬರುತ್ತಿವೆ. ಕೆರೆಗೆ ನೀರು ಬಾರದೆ, ಅಲ್ಲಿ ಗಿಡ ಗಂಟಿಗಳು ಬೆಳೆದಿವೆ. ನೀರಿಲ್ಲದೆ ಈಗಲೇ ಜನ-ಜಾನುವಾರುಗಳು ಪರಿತಪಿಸುವಂತಾಗಿದೆ. ಬೇಸಿಗೆಯಲ್ಲಿ ಸ್ಥಿತಿ ಹೇಗೋ ಎಂಬ ಆತಂಕ ಮೂಡಿದೆ.
ಈ ಕೆರೆ ಭರ್ತಿಯಾದರೆ ಕುಡಿಯಲು, ಬಟ್ಟೆ-ಪಾತ್ರೆ ಹಾಗೂ ದನಕರುಗಳ ಮೈ ತೊಳೆಯಲು ಅನುಕೂಲವಾಗುತ್ತಿತ್ತು. ಕೆರೆಯ ಸುತ್ತ ಅಂತರ್ಜಲ ಹೆಚ್ಚಿ, ಬತ್ತ, ಕಬ್ಬು ಇತ್ಯಾದಿಗಳನ್ನು ಬೆಳೆದು ರೈತರೂ ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಿದ್ದರು. ಅದರೆ ನಾಲ್ಕು ವರ್ಷಗಳಿಂದ ಕೆರೆ ಅಚ್ಚುಕಟ್ಟು ಭಾಗದಲ್ಲಿರುವ ಜಮೀನುಗಳಲ್ಲಿ ಹತ್ತಿ ಬಿತ್ತನೆ ಮಾಡಿ ಜೌಗಿನಿಂದಾಗಿ ಹತ್ತಿ ಬೆಳೆ ಕುಂಠಿತಗೊಂಡಿದೆ. ಬೆಳೆಗೆ ಹಾಕಿದ ಗೊಬ್ಬರ ಹಾಗೂ ಬಿತ್ತನೆ ಬೀಜಕ್ಕಾಗಿ ಖರ್ಚು ಮಾಡಿದ ಹಣವೂ ಹುಟ್ಟದೆ ರೈತರನ್ನು ಚಿಂತೆಗೀಡು ಮಾಡಿದೆ.
ಜೂನ್ ತಿಂಗಳಲ್ಲಿ ಬಂದ ಮಳೆ ನೋಡಿ, ಈ ಬಾರಿ ಕೆರೆ ತುಂಬುತ್ತದೆ ಎಂದು ರೈತರು ನಿರೀಕ್ಷಿಸಿದ್ದರು. ಬಿತ್ತನೆಯನ್ನೂ ಮಾಡಿದ್ದರು. ಈಗ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ಕೆರೆ ತುಂಬಿದ್ದರೆ ಬತ್ತ ಬೆಳೆಯುತ್ತಿದ್ದೆವು. ಆಮೇಲೆ ಮಳೆ ಕೈಕೊಟ್ಟಿತು. ಬತ್ತಿದ ಕೆರೆ ಉಕ್ಕಲೇ ಇಲ್ಲ. ವ್ಯಥೆಯಾಗುತ್ತಿದೆ ಎಂದು ರೈತರು ಅಲವತ್ತುಕೊಂಡರು.
ಕಾಯಕಲ್ಪಕ್ಕೆ ಆಗ್ರಹ
ತಾಲೂಕಿನ ಅತಿ ದೊಡ್ಡ ಕೆರೆಯಾಗಿರುವ ಕೋಡ ಗ್ರಾಮದ ಕೆರೆಗೆ ಸರ್ಕಾರ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕಾಯಕಲ್ಪ ನೀಡಬೇಕಾಗಿದೆ. ಕೆರೆಗೆ ನೀರು ಬರುವ ಕಾಲುವೆಗಳನ್ನು ಪುನಃ ದುರಸ್ತಿ ಮಾಡುವುದು ಮತ್ತು ಸಮೀಪದ ಯಾವುದಾದರೂ ನದಿ ಮೂಲದಿಂದ ಮಳೆಗಾಲದಲ್ಲಿ ಕೆರೆಯನ್ನು ತುಂಬಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ರೈತರು. ಇನ್ನಾದರೂ ಜನಪ್ರತಿನಿಧಿಗಳು ಈ ಕಾರ್ಯಕ್ಕೆ ಮುಂದಾಗುವರೇ ಎಂದು ಕಾದು ನೋಡಬೇಕಿದೆ.
-ಗಂಗಾಧರ ಹಲಗೇರಿ