ದೀಪಾವಳಿ ಪರಿಸರಸ್ನೇಹಿಯಾಗಿ ಆಚರಿಸಿ
ಹಾವೇರಿ: ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಶಬ್ದ-ವಾಯು ಮಾಲಿನ್ಯ ಹಾಗೂ ಘನತ್ಯಾಜ್ಯ ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುವುದು ಸಾಮಾನ್ಯ. ಬೆಳಕಿನ ಹಬ್ಬ ದೀಪಾವಳಿಯನ್ನು ಎಲ್ಲರೂ ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ಪಟಾಕಿ ಬಳಸುವಾಗ ಎಚ್ಚರವಿರಲಿ. ಸ್ವಲ್ಪ ಮೈಮರೆತರೂ ಜೀವನದ ಬೆಳಕನ್ನೇ ಕಸಿದುಕೊಳ್ಳಬಹುದು. ಹಬ್ಬದ ಆಚರಣೆ ಸುರಕ್ಷತೆ ಹಾಗೂ ಜಾಗರೂಕತೆಯಿಂದ ಆಗಲಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಾವೇರಿ ಘಟಕದ ಪರಿಸರ ಅಧಿಕಾರಿ ಈ. ಪ್ರಕಾಶ್ ವಿನಂತಿಸಿದ್ದಾರೆ. ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಹಿನ್ನೆಲೆಯಲ್ಲಿ 125 ಡೆಸಿಬಲ್ಗಿಂತ ಹೆಚ್ಚಿನ ಪ್ರಮಾಣದ ಶಬ್ದ ಮಾಡುವ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಪಟಾಕಿ ಹಚ್ಚುವುದು ಅಪರಾಧ. ಸಾರ್ವಜನಿಕರು ಪಟಾಕಿ ಖರೀದಿಸುವ ಮುನ್ನ ಗುಣಮಟ್ಟ ಪರೀಕ್ಷಿಸಿಕೊಳ್ಳಬೇಕು. ಹಬ್ಬದ ಆಚರಣೆಯಲ್ಲಿ ಬೆಳಕೇ ಪ್ರಧಾನವಾಗಿರಲಿ. ಗಿಡ-ಮರಗಳು, ಪ್ರಾಣಿ-ಪಕ್ಷಿಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಿ. ಪಟಾಕಿ ಹೊರಸೂಸುವ ವಿಷಯುಕ್ತ ಅನಿಲ ಕಾಯಿಲೆಗಳು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಪಟಾಕಿ ಸಿಡಿಸುವುದರಿಂದ ಉತ್ಪತ್ತಿಯಾಗುವ ಘನತ್ಯಾಜ್ಯ ನಗರಗಳಲ್ಲಿ ಸಮಸ್ಯೆ ಸೃಷ್ಟಿಸುತ್ತದೆ. ಹೀಗಾಗಿ, ಪಟಾಕಿ ಬಳಕೆ ಕಡಿಮೆ ಮಾಡಿ. ಶುಚಿತ್ವಕ್ಕೂ ಆದ್ಯತೆ ನೀಡಿ ಎಂದು ಮನವಿ ಮಾಡಿದ್ದಾರೆ.
ಯುವಕರಿಗೆ ಸಮಾಜೋಪಯೋಗಿ ಶಿಕ್ಷಣ ನೀಡಿ: ಸುಧೀರಸಿಂಹ ಘೋರ್ಪಡೆ
ಹಿರೇಕೆರೂರು: ದೇಹ-ಮನಸ್ಸುಗಳ ಸಮನ್ವಯಕ್ಕೆ ನೆರವಾಗುವ ಶಿಕ್ಷಣ ಯುವಕರಿಗೆ ದೊರೆಯಬೇಕು. ಬಾಹ್ಯ ಆಕರ್ಷಣೆಗೆ ಒಳಗಾಗದೆ ಸಮಾಜ ಉಪಯೋಗಿ ಕಾರ್ಯಗಳಲ್ಲಿ ತೊಡಗುವ ಶಿಕ್ಷಣ ನೀಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧಾರವಾಡ ವಿಭಾಗದ ಸಂಪರ್ಕ ಪ್ರಮುಖ ಸುಧೀರಸಿಂಹ ಘೋರ್ಪಡೆ ತಿಳಿಸಿದರು. ತಾಲೂಕಿನ ರಟ್ಟೀಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿದ ಆರೆಸ್ಸೆಸ್ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಳೆ ಬಂದರೆ ಕೆರೆ, ಕೊಳ್ಳ, ನದಿ ಮುಂತಾದ ರೂಪಗಳಲ್ಲಿ ಹರಿಯುವ ನೀರು ಕೊನೆಗೆ ಸಮುದ್ರ ಸೇರುತ್ತದೆ. ನಮ್ಮಲ್ಲಿ ಪೂಜಾ ವಿಧಿ-ವಿಧಾನಗಳು ಬೇರೆಯಾಗಿದ್ದರೂ ಅವು ಅರ್ಪಿತವಾಗುವುದು ದೇವರಿಗೇ. ಸಂಘದ ದೇಶಪ್ರೇಮ, ರಾಷ್ಟ್ರ ರಕ್ಷಣೆ ಧ್ಯೇಯಗಳು ಬದಲಾಗಿಲ್ಲ. ವಿಶ್ವದ 34 ದೇಶಗಳಲ್ಲಿ ಸಂಘಟನೆ ಪರಿಣಾಮಕಾರಿಯಾಗಿ ಬೆಳೆದಿದೆ. ಹಿಂದೂ ಸಮಾಜ ಒಂದಾದಾಗ ದೇಶದ ಸಮಸ್ಯೆ ಪರಿಹರಿಸಲು ಸಾಧ್ಯ ಎಂದರು. ರಾಷ್ಟ್ರ ರಾಜಕಾರಣಿಗಳ ನಿರ್ಲಕ್ಷ್ಯದಿಂದ ರಾಮ ಮಂದಿರ ನಿರ್ಮಾಣ ಸ್ಥಗಿತಗೊಂಡಿದೆ. ವಿದೇಶಿ ವಸ್ತುಗಳು ಸ್ವದೇಶಿ ವಸ್ತುಗಳ ಮೇಲೆ ಸವಾರಿ ಮಾಡಿದ್ದು ನಮ್ಮ ದೇಶದ ಆರ್ಥಿಕ ಸ್ಥಿತಿ ಸಡಿಲಗೊಳ್ಳಲು ಕಾರಣ. ಸ್ವದೇಶಿ ವಸ್ತುಗಳನ್ನು ಬಳಸಿ, ದೇಶದ ಆರ್ಥಿಕ ಸ್ಥಿತಿ ಗಟ್ಟಿಗೊಳಿಸಬೇಕೆಂದು ಕರೆ ನೀಡಿದರು. ರಟ್ಟೀಹಳ್ಳಿ ಹೆಸ್ಕಾಂ ನಿವೃತ್ತ ಅಭಿಯಂತ ಸುಭಾಸ ಹದಡೇರ ಅಧ್ಯಕ್ಷತೆ ವಹಿಸಿದ್ದರು. ವರ್ಗಾಧಿಕಾರಿ ಗಂಗಾಧರ ಮತ್ತೂರ ಇದ್ದರು.
ಪಥ ಸಂಚಲನ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸ್ವಯಂ ಸೇವಕರಿಂದ ಭಗವಾ ಧ್ವಜದೊಡನೆ ಆಕರ್ಷಕ ಪಥ ಸಂಚಲನ ಜರುಗಿತು. ಜನತೆ ಅದ್ಧೂರಿ ಸ್ವಾಗತ ಕೋರಿದರು.