ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

6 ತಿಂಗಳಾಯ್ತು, ಒಂದೂ ಸಭೆಯಿಲ್ಲ

Lingaraj Badiger
Updated On : 26 Oct 2013, 10:51 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಅ. 25
ನಗರಸಭೆಯ 31 ಸ್ಥಾನಗಳಿಗೆ ಚುನಾವಣೆ ನಡೆದು 6 ತಿಂಗಳು ಗತಿಸಿದ ಮೇಲೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಅವರು ಗದ್ದುಗೆ ಹಿಡಿದು ತಿಂಗಳು ಗತಿಸಿದ್ದರೂ ಇನ್ನೂ ಸರ್ವ ಸದಸ್ಯರ ಸಭೆ ನಡೆಸಿ, ನಗರದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಕುಂದು-ಕೊರತೆ ಪರಿಹರಿಸುವ ಬಗ್ಗೆ ಚರ್ಚಿಸಿಲ್ಲ. ಹೊಸ ಕಾಮಗಾರಿ ಕೈಗೊಳ್ಳುವಲ್ಲೂ ಆಡಳಿತ ಮಂಡಳಿ ವಿಫಲವಾಗಿದೆ.
ಆರು ತಿಂಗಳ ಹಿಂದೆ ನಗರಸಭೆಯ 31 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ನಗರಸಭೆ ಮಾಜಿ ಅಧ್ಯಕ್ಷರಾದ ರಾಮಣ್ಣ ಕೋಲಕಾರ, ಶೇಖಪ್ಪ ಹೊಸಗೌಡ್ರ, ಹಾಲಿ ಉಪಾಧ್ಯಕ್ಷ ಶಿವಪ್ಪ ಮಣೇಗಾರ, ಪುಟ್ಟಪ್ಪ ಮರಿಯಮ್ಮನವರ, ರತ್ನಾ ಪುನೀತ ಇವರನ್ನು ಹೊರತುಪಡಿಸಿದರೆ, ಉಳಿದ ಸದಸ್ಯರು ಹೊಸಬರು. ಆಗೊಮ್ಮೆ, ಈಗೊಮ್ಮೆ ನಗರಸಭೆ ಕಾರ್ಯಾಲಯಕ್ಕೆ ಆಗಮಿಸಿ, ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿಯನ್ನು ಹಾಗೂ ಕೆಲಸ-ಕಾರ್ಯಗಳ ನಿಮಿತ್ತ ಬರುವ ಸಾರ್ವಜನಿಕರನ್ನು ಪರಿಚಯ ಮಾಡಿಕೊಳ್ಳುವುದರಲ್ಲೇ ಕಾಲ ಕಳೆದಿದ್ದಾರೆ. ಇನ್ನೂ ಸಭೆ ನಡೆಯದಿರುವ ಕುರಿತು ಅವರಿಗೂ ಅಸಮಾಧಾನವಿದೆ.
ಸಮಸ್ಯೆಗಳ ಆಗರ
ಸಾಕಷ್ಟು ಅಭಿವೃದ್ಧಿ ಹೊಂದಿರುವ ನಗರವೆಂಬ ಖ್ಯಾತಿಗೆ ಪಾತ್ರವಾಗಿದ್ದ ರಾಣಿಬೆನ್ನೂರು ಈಗ ಸಮಸ್ಯೆಗಳ ಆಗರವಾಗಿದೆ. ಸಾಕಷ್ಟು ಹಣ ಖರ್ಚು ಮಾಡಿ ನಿರ್ಮಿಸಿರುವ ದುರ್ಗಾ ತರಕಾರಿ ಮಾರುಕಟ್ಟೆಯಲ್ಲಿ ಜನರಿಗಿಂತ ಹೆಚ್ಚಾಗಿ ಬಿಡಾಡಿ ದನಗಳ ಮತ್ತು ಹಂದಿಗಳ ತಾಣವಾಗಿದೆ. ಶಕ್ತಿ ಚಿತ್ರ ಮಂದಿರದ ಪಕ್ಕದಲ್ಲಿರುವ ದೌಲತ್ತ ಬಜಾರ ಹಾಗೂ ಹಳೆ ತರಕಾರಿ ಮಾರುಕಟ್ಟೆ, ಈರುಳ್ಳಿ ಮತ್ತು ಒಣ ಮೆಣಸಿನಕಾಯಿ ಮಾರುಕಟ್ಟೆ ಕಸದಿಂದ ತುಂಬಿದೆ. ಗಟಾರಗಳು ಗಬ್ಬು ನಾರುತ್ತಿವೆ. ರಾತ್ರಿಯಲ್ಲಿ ಬೀದಿ ಬೆಳಗಬೇಕಿದ್ದ ದೀಪಗಳೂ ಕಣ್ಣು ಮುಚ್ಚಿವೆ.
ಹಂದಿ, ನಾಯಿ ಹಾವಳಿ
ಪುರಸಭೆ ಆಡಳಿತದಲ್ಲಿದ್ದ ಬಿಜೆಪಿ ಎರಡು ವರ್ಷಗಳ ಹಿಂದೆ ಬಿಡಾಡಿ ನಾಯಿ ಹಾಗೂ ಹಂದಿಗಳನ್ನು ಹಿಡಿದು ಹೊರಗೆ ಸಾಗಿಸಿದ್ದರಿಂದ ಅವುಗಳ ಹಾವಳಿ ಗಣನೀಯವಾಗಿ ನಿಯಂತ್ರಣಗೊಂಡಿತ್ತು. ಈಚೆಗೆ ಮತ್ತೆ ಉಪಟಳ ಹೆಚ್ಚಿದೆ. ಸಾರ್ವಜನಿಕರಿಗೂ ತೊಂದರೆ ಮಾಡುತ್ತಿವೆ.
ನಗರದ ನ್ಯಾಯಾಲಯದ ಹಿಂದೆ ಹಾದುಹೋಗಿರುವ ಹಳೆ ಅಂತರವಳ್ಳಿ ರಸ್ತೆ ಪಕ್ಕದಲ್ಲಿ ನಿರ್ಮಿಸಿರುವ ಮಹಿಳಾ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳು ಉದ್ಘಾಟನೆ ಆಗದೆ, ಕಟ್ಟಡವು ಕಸದ ರಾಶಿ ಮತ್ತು ಧೂಳಿನ ಮಧ್ಯೆ ಸಿಲುಕಿದೆ.
ಸಂಗಮ್ ವೃತ್ತ, ಚೌಕಮುಖಿ ದುರ್ಗಾದೇವಿ ದೇವಸ್ಥಾನದ ಸಮೀಪವಿರುವ ಸಾರ್ವಜನಿಕ ಮೂತ್ರಾಲಯಗಳು ಗಬ್ಬೆದ್ದು ನಾರುತ್ತಿವೆ. ನಗರದ ಮಧ್ಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎನ್.ವಿ. ಹೋಟೆಲ್‌ನಿಂದ ಪಶ್ಚಿಮ ಪ್ಲಾಟ್‌ವರೆಗೆ ಸುಮಾರು 3 ಕಿ.ಮೀ. ಅಂತರದಲ್ಲಿ ಹಾಕಿರುವ ಬೀದಿ ದೀಪಗಳು ಬೆಳಕು ನೀಡುವುದನ್ನು ನಿಲ್ಲಿಸಿವೆ.
ಭರವಸೆ ಈಡೇರಿಲ್ಲ
ನಗರಸಭೆಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಅರ್ಜಿಯನ್ನು ಸಿಬ್ಬಂದಿ ಬದಲಿಗೆ ನೇರವಾಗಿ ಪೌರಾಯುಕ್ತರಿಗೆ ಸಲ್ಲಿಸಬೇಕೆಂದು ತಿಳಿಸಿದ್ದಲ್ಲದೆ, ಅನಾವಶ್ಯಕವಾಗಿ ನಗರಸಭೆ ಆವರಣದಲ್ಲಿ ಸುತ್ತಾಡುತ್ತ ನೌಕರರಿಗೆ ಕಿರಿಕಿರಿ ಮಾಡುವವರ ನಿಯಂತ್ರಣಕ್ಕಾಗಿ ಹಾಗೂ ನೌಕರರ ಕೆಲಸದ ಮೇಲೆ ನಿಗಾ ಇರಿಸುವ ಸಲುವಾಗಿ ಸಿಸಿ ಕ್ಯಾಮೆರಾ ಅಳವಡಿಸುವುದಾಗಿ ಅ. 4ರಂದು ಶಾಸಕ ಕೆ.ಬಿ. ಕೋಳಿವಾಡ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು. ಅದಿನ್ನೂ ಭರವಸೆಯಾಗಿಯೇ ಉಳಿದಿದೆ.
ಆದಷ್ಟು ಶೀಘ್ರ ನಗರಸಭೆಯ ಸಾಮಾನ್ಯ ಸಭೆ ಕರೆದು, ಜನರ ಸಮಸ್ಯೆಗಳಿಗೆ ಉತ್ತರ ನೀಡುವ ಕೆಲಸವನ್ನು ಆಡಳಿತ ಮಂಡಳಿ ಮಾಡುವುದೇ?
-ಸಾಬ್ಜನ ಇಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement