ಅರ್ಥಪೂರ್ಣ ರಾಜ್ಯೋತ್ಸವ: ನಿರ್ಧಾರ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಅ. 25
ಸಾರ್ವಜನಿಕರು, ಅಧಿಕಾರಿಗಳ ಸಹಕಾರದಲ್ಲಿ ನಾಡು-ನುಡಿ, ಸಂಸ್ಕೃತಿ ಹಾಗೂ ಅಭಿವೃದ್ಧಿ ಬಿಂಬಿಸುವ ರೂಪಕಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸಾಧಕರನ್ನು ಸನ್ಮಾನಿಸಲಾಗುವುದು. ಸನ್ಮಾನಿತರ ಆಯ್ಕೆಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಸಾಧಕರು ಅಥವಾ ಸೂಚಕರು ಅ. 30ರೊಳಗೆ ಮಾಹಿತಿ ನೀಡಬೇಕು ಎಂದರು.
ನ. 1ರಂದು ಬೆಳಗ್ಗೆ 8 ಗಂಟೆಗೆ ನಗರದ ಕನಕ ವೃತ್ತದಿಂದ ರಾಜ್ಯೋತ್ಸವದ ಅಂಗವಾಗಿ ಭುವನೇಶ್ವರಿಯ ಮೆರವಣಿಗೆ ವಾಧ್ಯವೈಭವಗಳೊಂದಿಗೆ ನಡೆಯುತ್ತದೆ. ಸ್ತಬ್ಧಚಿತ್ರಗಳು ಮೆರವಣಿಗೆ ಮೆರುಗು ಹೆಚ್ಚಿಸಲಿವೆ. ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಮಾರಂಭ ನಡೆಯುತ್ತದೆ. ಮಾಧ್ಯಮಿಕ ಶಾಲಾ ಹಂತದ ಮಕ್ಕಳಿಗೆ ಬಿಇಒ ಕಚೇರಿ ಮೂಲಕ ಪ್ರಬಂಧ ಹಾಗೂ ಚರ್ಚಾಸ್ಪರ್ಧೆ ನಡೆಸಲಾಗುವುದು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಗರಿಷ್ಠ ಅಂಕ ಗಳಿಸಿದವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಬಹುಮಾನ ನೀಡಲಿದೆ ಎಂದು ಡಾ ಹೊನ್ನಳ್ಳಿ ವಿವರಿಸಿದರು.
ಕನ್ನಡ ನಾಮಫಲಕ
ಹಾನಗಲ್ಲ ತಾಲೂಕಿನಲ್ಲಿ ವಾಣಿಜ್ಯ ಮಳಿಗೆಗಳು, ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ಹಾಗೂ ಶಿಕ್ಷಣ ಸಂಸ್ಥೆಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲೇ ಬರೆದಿರಬೇಕು. ಕನ್ನಡವಲ್ಲದೆ ಅನ್ಯಭಾಷೆಯ ಫಲಕಗಳಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿರಬೇಕು ಎಂದರು.
ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಹರಿಜನ, ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ವೈ. ಬಂಡಿವಡ್ಡರ, ಜಿಪಂ ಸ.ಕಾ.ನಿ. ಅಧಿಕಾರಿ ಕೆ.ಆರ್. ಮಠದ, ಸಿಡಿಪಿಒ ಬಿ.ಆರ್. ಶೆಟ್ಟರ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ, ನಗರ ಘಟಕದ ಮಾಜಿ ಅಧ್ಯಕ್ಷ ಜಿ.ಎಂ. ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ಡಾ ರಾಜೇಂದ್ರ ಗೊಡ್ಡೆಮ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎಫ್. ಕೆಂಗಮ್ಮನವರ, ಪುರಸಭೆ ಮಾಜಿ ಅಧ್ಯಕ್ಷೆ ಹಸೀನಾ ಬೇಗಂ ನಾಯಕನವರ, ಪ್ರಾಚಾರ್ಯ ಪಿ.ವಿ. ಮಿರ್ಜಿ, ಎನ್. ಸದಾಶಿವಪ್ಪ, ಜಿ.ಎಂ. ಹೊಸಮನಿ, ರೋಶನಿ ಸಮಾಜ ಸೇವಾ ಸಂಸ್ಥೆಯ ವಿನಯಕುಮಾರ, ತಾಪಂ ಮಾಜಿ ಸದಸ್ಯ ದಾನಪ್ಪ ಗಂಟೇರ, ಕರವೇ ಅಧ್ಯಕ್ಷ ಹನುಮಂತ ಕೋಣನಕೊಪ್ಪ, ತಾರಾ ನಾಯಕ, ಬಿ.ಐ. ಹುನಗುಂದ ಇದ್ದರು.