ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿವಾಹಿತೆ ಹತ್ಯೆ: ದೂರು

Lingaraj Badiger
Updated On : 26 Oct 2013, 10:52 am

ಬ್ಯಾಡಗಿ: ವಿವಾಹಿತ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಕೇರಿ ಗ್ರಾಮದಲ್ಲಿ ನಡೆದಿದೆ. ಸವಿತಾ ಮಂಜಪ್ಪ ಬೆನ್ನೂರ (36) ಹತ್ಯೆಯಾದ ಮಹಿಳೆ. ಆಕೆ ಅದೇ ಗ್ರಾಮದ ಅವಿವಾಹಿತ ಯುವಕ ರವಿ ಕುಬೇರಪ್ಪ ಶಿರೂರ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಆತನೇ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಗ್ರಾಮದ ಹೊರವಲಯದಲ್ಲಿರುವ ಹೊಲವೊಂದರಲ್ಲಿ ಈಕೆಯ ಮೃತದೇಹ ಸಿಕ್ಕಿದ್ದು, ಹತ್ಯೆಯಾಗಿ ಮೂರು ದಿನಗಳು ಕಳೆದಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಮದುವೆಯಾಗಿ ಇಬ್ಬರು ಮಕ್ಕಳಿರುವ ಸವಿತಾ ಎರಡು ವರ್ಷಗಳಿಂದ ರವಿ ಜತೆಗೆ ಸಂಬಂಧ ಹೊಂದಿದ್ದಳು. ಗ್ರಾಮದ ಮುಖಂಡರು ಇಬ್ಬರನ್ನೂ ಕರೆಸಿ 2-3 ಬಾರಿ ಬುದ್ಧಿವಾದ ಹೇಳಿದರೂ ತಿದ್ದುಕೊಂಡಿರಲಿಲ್ಲ. ಅ. 21ರಂದು ಈ ಇಬ್ಬರೂ ಆಕೆಯ ಮನೆಯಲ್ಲೇ ಗಂಡ ಮಂಜಪ್ಪನ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಆಗ ಮಂಜಪ್ಪ ಹಾಗೂ ಇತರರು ಸೇರಿ ಇಬ್ಬರನ್ನೂ ಹಿಗ್ಗಾಮುಗ್ಗಾ ಥಳಿಸಿದ್ದರು. ಮರುದಿನ ಬೆಳಗ್ಗೆಯೇ ಸವಿತಾ ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಳು. ಹೊಲದಲ್ಲಿ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಗ್ರಾಮಸ್ಥರು ಹುಡುಕಾಡಿದಾಗ ಶವ ಪತ್ತೆಯಾಗಿದೆ.
ತಮ್ಮ ಮಗಳನ್ನು ರವಿ ಶಿರೂರನೇ ಕೊಲೆ ಮಾಡಿದ್ದಾನೆಂದು ಆರೋಪಿಸಿ ಸವಿತಾಳ ತಂದೆ ಆಲದಕೇರಿ ಗ್ರಾಮದ ಜುಂಜಪ್ಪ ಬಸಪ್ಪ ಹಿರಿಯಕ್ಕನವರ ಬ್ಯಾಡಗಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಜಂಗಮಯ್ಯ, ಡಿವೈಎಸ್ಪಿಗಳಾದ ಸಿ.ಸಿ. ಪಾಟೀಲ, ಗೋಪಾಲ ಬ್ಯಾಕೋಡ, ಪಿಎಸ್‌ಐ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement