ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ವಿಸ್ತರಿಸಿ
ಬ್ಯಾಡಗಿ: ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ವಿಸ್ತರಿಸುವಂತೆ ಆಗ್ರಹಿಸಿ ತಾಲೂಕು ಪದವೀಧರರ ಸಂಘದ ಕಾರ್ಯಕರ್ತರು ಶನಿವಾರ ತಹಸೀಲ್ದಾರ್ ಶಿವಶಂಕರ ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ರಾಜ್ಯ ಘಟಕದ ಉಪಾಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಸರ್ಕಾರ ಈಗಾಗಲೇ ನಿಗದಿಪಡಿಸಿದ ಅವಧಿ ಅ. 30 ನೂತನ ಸದಸ್ಯರ ನೋಂದಣಿಗೆ ಅಂತಿಮ ದಿನವಾಗಿದೆ. ಆದರೆ, ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ರಜೆಗಳು ಬಂದಿದ್ದು, ಬಹಳಷ್ಟು ಪದವಿಧರರು ನೋಂದಣಿ ಕಾರ್ಯದಿಂದ ದೂರ ಉಳಿದಿದ್ದಾರೆ. ಪದವೀಧರ ಮತಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪ್ರಚಾರದ ಕೊರೆತೆಯಿಂದ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಇದರಿಂದ ಸಂವಿಧಾನಾತ್ಮಕ ಹಕ್ಕನ್ನು ಕಳೆದುಕೊಳ್ಳುವಂತಾಗಲಿದೆ ಎಂದರು. ನೋಂದಣಿ ಅರ್ಜಿ (ನಮೂನೆ-18) ಆಂಗ್ಲಭಾಷೆಯಲ್ಲಿದ್ದು, ಎಲ್ಲರಿಗೂ ಸರಳವಾಗಿ ಅರ್ಥವಾಗುವಂತಿಲ್ಲ. ಸರ್ಕಾರ ಈ ವಿಷಯದಲ್ಲಿ ಪ್ರತಿಯೊಬ್ಬ ಪದವೀಧರರನ್ನು ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ ಅವರು, ಪದವೀಧರ ಕುರಿತು ನಿರ್ಲಕ್ಷ್ಯ ತೋರುತ್ತಿರುವುದು ಶಿಕ್ಷಣವಂತರನ್ನು ಅವಮಾನಿಸಿದಂತಾಗಿದೆ ಎಂದರು. ಜಾರಿಗೊಳಿಸಿರುವ ಅವಧಿಯಿಂದ ಸಾಕಷ್ಟು ಪದವೀಧರರು ಸದಸ್ಯತ್ವದಿಂದ ವಂಚಿತರಾಗುತ್ತಿದ್ದು, ಸರ್ಕಾರ ಕೂಡಲೆ ಅವಧಿಯನ್ನು ಮತ್ತೊಮ್ಮೆ ಪರಿಶೀಲಿಸಿ ಡಿ. 1ರ ವರೆಗೆ ಅವಧಿ ಮುಂದುವರಿಸುವಂತೆ ಆಗ್ರಹಿಸಿದರು. ಈ ಸಂದರ್ಭ ರಾಜ್ಯ ಕಾರ್ಯದರ್ಶಿ ಭಾಸ್ಕರ ಮುದೇನೂರು, ರಾಣಿಬೆನ್ನೂರು ಘಟಕ ಅಧ್ಯಕ್ಷ ವಿನಾಯಕ ಶಿಗ್ಲಿಕರ, ಸರೋಜಿನಿ ಬಾರಾಟಿಕೆ, ಗಣೇಶ ಮಾಗಳದ, ಸುನಿಲ್ ಧಾರವಾಡ, ಪ್ರಕಾಶ ದವಂಡೆ, ಕರಬಸಪ್ಪ ಹಳಿಯಾಳದ, ಪರಮೇಶ ಬಿ.ಕೆ, ಬಿ.ಬಿ. ಚೂರಿ, ಎಸ್.ಪಿ. ದೊಡ್ಡಮನಿ, ರಾಜು ಗೊಂದಿಮಲ್ಲ, ಅಣ್ಣಪ್ಪ ದ್ಯಾಮನಗೌಡ್ರ, ಸಂಜೀವ ಮಡಿವಾಳರ ಇದ್ದರು.