ರಾಹುಲ್ ಗಾಂಧಿ ಅಪ್ರಬುದ್ಧ ನಾಯಕ: ಪ್ರಹ್ಲಾದ ಜೋಶಿ ಟೀಕೆ
ಹಾವೇರಿ: ಕಾಂಗ್ರೆಸ್ ಪಕ್ಷದ ಭವಿಷ್ಯದ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿತರಾಗಿರುವ ರಾಹುಲ್ ಗಾಂಧಿ ಅವರೊಬ್ಬ ಅಪ್ರಬುದ್ಧ ನಾಯಕರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆಗಿರುವ ಸಂಸದ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.
ಬಿಜೆಪಿ ಹಾವೇರಿ ಜಿಲ್ಲಾ ಘಟಕ ಶನಿವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾವ ಸಂದರ್ಭದಲ್ಲಿ ಯಾವ ರೀತಿ ಮಾತುಗಳನ್ನಾಡಬೇಕೆಂಬ ಪರಿವೇ ಇಲ್ಲದ ರಾಹುಲ್ ಅವರನ್ನು ಕಾಂಗ್ರೆಸ್ಸಿಗರು ದೇಶದ ಪ್ರಧಾನಿ ಮಾಡಲು ಹೊರಟಿದ್ದು ನಿಜಕ್ಕೂ ದುರ್ದೈವದ ಸಂಗತಿಯೇ ಸರಿ ಎಂದರು. ಭಯೋತ್ಪಾದಕತೆ ಕುರಿತಾದ ವಿಷಯಗಳನ್ನು ಬೇಹುಗಾರಿಕೆ ಸಂಸ್ಥೆಯವರು ನೇರವಾಗಿ ಪ್ರಧಾನಮಂತ್ರಿಗೆ ಮಾತ್ರ ಮಾಹಿತಿ ನೀಡಬೇಕಾಗಿರುತ್ತದೆ. ಆದರೆ, ಇತ್ತೀಚೆಗೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, ಕೆಲ ಅಲ್ಪಸಂಖ್ಯಾತರು ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ವಿಷಯವನ್ನು ಬೇಹುಗಾರಿಕೆ ಅಧಿಕಾರಿಗಳು ತಮಗೆ ತಿಳಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆ ಅಧಿಕಾರಿ ಯಾರು ಎಂಬುದನ್ನು ಬಹಿರಂಗಪಡಿಸಬೇಕು. ಅಲ್ಲದೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದೂ ಜೋಶಿ ಒತ್ತಾಯಿಸಿದರು. ನವೆಂಬರ್ ತಿಂಗಳಲ್ಲಿ ಗುಜರಾತ್ ಮುಖ್ಯಮಂತ್ರಿ ಬೆಂಗಳೂರಿನಲ್ಲಿ ನಡೆಸಲಿರುವ ರ್ಯಾಲಿಯನ್ನುದ್ದೇಶಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಪ್ರಧಾನಿಯಾಗಿದ್ದರೆಂಬ ವಿಷಯ ರಾಜ್ಯದ ಜನತೆಗೆ ಬಿಟ್ಟು ಬೇರೆಯವರಿಗೆ ತಿಳಿದಿರಲಿಲ್ಲ ಎಂದು ವ್ಯಂಗ್ಯವಾಡಿದರು. ಅಭಿವೃದ್ಧಿಯಲ್ಲಿ ಗುಜರಾತ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮೋದಿ ದೇಶದ ಪ್ರಧಾನಿಯಾದಲ್ಲಿ ದೇಶದ ಭವಿಷ್ಯ ಉತ್ತುಂಗಕ್ಕೆ ಕೊಂಡ್ಯೊಯಲಿದ್ದಾರೆ ಎಂಬುದನ್ನು ಅರಿತುಕೊಳ್ಳಲಿ ಎಂದ ಅವರು, ದೇವೇಗೌಡರಿಗೆ ತಾಕತ್ತಿದ್ದರೆ ಮೋದಿ ನಡೆಸುತ್ತಿರುವ ರ್ಯಾಲಿಯನ್ನು ಜೆಡಿಎಸ್ನವರು ನಡೆಸಿ ಶಕ್ತಿ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.