ಸರಿಯಾಗಿ ಅನುಷ್ಠಾನಗೊಳಿಸಿ
ಹಿರೇಕೆರೂರು: ಸರ್ಕಾರ ಗ್ರಾಮಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನ್ನು ಜಾರಿಗೆ ತಂದಿದ್ದು, ಅವುಗಳನ್ನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ ಅದಕ್ಕಾಗಿ ಸರ್ಕಾರ ಮಾಹಿತಿ ತರಬೇತಿ ಶಿಬಿರ ಏರ್ಪಡಿಸಿದ್ದು, ಇದರ ಸದುಪಯೋಗ ಪಡೆದುಕೊಂಡು ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕೆಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಉಪಗ್ರಹ ಆಧಾರಿತ ಸಂವಹನ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಯೋಜನೆಗಳ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಕೇವಲ ಪುಸ್ತಕಗಳಲ್ಲಿ ಉಳಿಯದೆ ನೈಜವಾಗಿ ಗ್ರಾಮೀಣ ಜನರಿಗೆ ತಲುಪಬೇಕು. ಅನುದಾನ ಸದ್ಭಳಕೆಯಾಗಬೇಕು. ಯೋಜನೆಗಳು ತ್ವರಿತಗತಿ ಕಾಲಮಿತಿಯಲ್ಲಿ ಸಮರ್ಪಕ ನಿರ್ವಹಿಸಬೇಕು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಂಕ್ರೀಟ್ ರಸ್ತೆ, ನಮ್ಮ ಹೊಲ-ನಮ್ಮ ರಸ್ತೆ ಮತ್ತಿತರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಮಾಹಿತಿ ಕಾರ್ಯಾಗಾರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಅನುಪಸ್ಥಿತಿ ಎದ್ದು ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭ ಜಿಪಂ ಸದಸ್ಯರಾದ ಪಾರ್ವತಿ ಭೋಗಾವಿ, ತಾಪಂ ಅಧ್ಯಕ್ಷೆ ರೇಣುಕಮ್ಮ ಚಲವಾದಿ, ಸದಸ್ಯರಾದ ಆರ್.ಎನ್. ಗಂಗೋಳ, ಸುನಿತಾ ಕೊಡ್ಲೇರ, ರೂಪಾ ಆಡೂರ, ನಾಗರತ್ನಾ ಕಂಕನವರ, ಚಂದ್ರು ಅಣ್ಣಪ್ಪನವರ, ಶೋಭಾ ಲಕ್ಕನಗೌಡ್ರ, ಪ್ರಭಾವತಿ ಕುಲಕರ್ಣಿ, ಜನಪ್ರತಿನಿಧಿಗಳು ಹಾಗೂ ಅನುಷ್ಠಾನಾಧಿಕಾರಿಗಳು ಪಾಲ್ಗೊಂಡಿದ್ದರು,
ತಾಪಂ ಕಾರ್ಯನಿರ್ವಹಕಾಧಿಕಾರಿ ಮಲ್ಲಿಕಾರ್ಜುನ ಮಾಳಗೇರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.