ಸೌಲಭ್ಯಕ್ಕೆ ಆಗ್ರಹಿಸಿ ಮನವಿ
ಹಿರೇಕೆರೂರು: ತಾಲೂಕಿನ ಮಾಸೂರು ಗ್ರಾಮದ ಸಿದ್ದೇಶ್ವರ ನಗರದ ಅಲೆಮಾರಿ ಜನಾಂಗದವರು ಮೂಲಸೌಲಭ್ಯಗಳನ್ನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಲಕ್ಷ್ಮಪ್ಪ ದುರುಮುರಗೇರ ಮಾತನಾಡಿ, ನಾವು ಅಲೆಮಾರಿ ಜನಾಂಗದವರಾಗಿದ್ದು, ನಮಗೆ ಯಾವುದೇ ಆಸ್ತಿ ಇರುವುದಿಲ್ಲ. ನಮಗೆ ಯೋಗ್ಯ ನಿವೇಶನ ಹಾಗೂ ಹಕ್ಕುಪತ್ರ ನೀಡಿಲ್ಲ. ಇದರಿಂದಾಗಿ ಅರಣ್ಯಾಧಿಕಾರಿಗಳು ತೀವ್ರ ಕಿರುಕುಳ ನೀಡುತ್ತಿದ್ದಾರೆ. ಸಂಚಾರಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಇನ್ನಿತರ ಮೂಲ ಸೌಲಭ್ಯಗಳನ್ನ್ನು ಕಲ್ಪಿಸಿ ನಮಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಶಾಸಕ ಯು.ಬಿ. ಬಣಕಾರ ಮಾತನಾಡಿ, ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಿದ್ದೇಶ್ವರ ನಗರಕ್ಕೆ ಮೂಲ ಸೌಕರ್ಯ ಒದಗಿಸುವ ಭರವಸೆ ನೀಡಿದರು. ಈ ಸಂದರ್ಭ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಮಾಳಗೇರ ಹಾಗೂ ಅಲೆಮಾರಿಗಳಾದ ಹನುಮಂತಪ್ಪ ಮಾಸೂರ, ಸಿದ್ದಪ್ಪ ದುರುಮುರಗಿ, ದುರ್ಗಪ್ಪ ಸಿಂದೂಳ, ಶಿವರಾಜ ಮೊಂಡರು, ಹುಲಗಪ್ಪ ದುರುಮುರಗಿ ಮೊದಲಾದವರು ಇದ್ದರು.
ಮೂಲಸೌಲಭ್ಯಕ್ಕೆ ಆಗ್ರಹ
ಶಿಗ್ಗಾಂವಿ: ಹುಲಗೂರು ಗ್ರಾಮಕ್ಕೆ ಮೂಲ ಸೌಲಭ್ಯಗಳ ಪೂರೈಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿಯವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. 12 ಸಾವಿರ ಜನಸಂಖ್ಯೆ ಹೊಂದಿರುವ ಹುಲಗೂರು, ಶಿಗ್ಗಾಂವಿ ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದು. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ 4 ಎಕರೆ ವಿಸ್ತಾರವಾಗಿದ್ದರೂ ಸಿಬ್ಬಂದಿ ಕೊರತೆ ಅನುಭವಿಸುತ್ತಿದೆ. ಇಲ್ಲಿ ಸಿಬ್ಬಂದಿ ವಸತಿಗೃಹ ನಿರ್ಮಾಣ ಮಾಡಿ, ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು. ಅಂಬ್ಯುಲೆನ್ಸ್ ಇದ್ದರೂ ಚಾಲಕನಿಲ್ಲ. ಆರೋಗ್ಯ ಕೇಂದ್ರದ ಎಲ್ಲ ಸಮಸ್ಯೆ ಸರಿಪಡಿಸಬೇಕು ಮನವಿಯಲ್ಲಿ ತಿಳಿಸಲಾಗಿದೆ. ಹುಲಗೂರ ಗ್ರಾಪಂನ ನೀರು ಸರಬರಾಜು ಹಾಗೂ ಬೀದಿ ದೀಪಗಳ ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಈ ಹಿಂದಿನಂತೆ ಸರ್ಕಾರವೇ ಭರಿಸಬೇಕು. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗೌರವಧನ ಹೆಚ್ಚಳ ಮಾಡಬೇಕು. ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳ ಸ್ಥಾನ ಭರ್ತಿ ಮಾಡಬೇಕು. ಹುಲಗೂರ ಗ್ರಾಮದ ಕೇಂದ್ರ ಸ್ಥಾನವಾದ ಗ್ರಾಪಂ ಸುತ್ತಲೂ ಸಾರ್ವಜನಿಕ ರಸ್ತೆಗಳನ್ನು ಸಿಸಿ ರಸ್ತೆ ಮಾಡಲು ಅನುದಾನ ಬಿಡುಗಡೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಕುರಿತು ಮನವಿ ಮಾಡಿದ್ದಾರೆ. ಮಾಜಿ ಶಾಸಕ ಅಜ್ಜಂಪೀರ ಎಸ್. ಖಾದ್ರಿ, ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಶೇಕಣ್ಣ ಗಣಾಚಾರಿ, ರತ್ನವ್ವ ಸಂಶಿ, ರುದ್ರಪ್ಪ ಕೆಳಗಿನಮನಿ, ಬಾಬುಸಾಬ ಚಂದರಗಿ, ಖಾದರಗೌಸ ನೆರ್ತಿ, ಮೌಲಾಲಿ ನೆರ್ತಿ, ಲಲಿತಾ ದ್ಯಾಪನಗೌಡ್ರ, ಹಜರೇಸಾಬ ಕಾರಡಗಿ, ದಯಾನಂದ ಮೆಣಸಿನಕಾಯಿ, ಶಿವನಗೌಡ್ರ ರಾಯನಗೌಡ್ರ ಉಪಸ್ಥಿತರಿದ್ದರು.