ಬಾಂಬ್ ಸ್ಫೋಟ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ
ಹಾವೇರಿ: ಬಿಹಾರದ ಪಾಟ್ನ್ನಾದಲ್ಲಿ ನಡೆದ ಹೂಂಕಾರ ರ್ಯಾಲಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬಹಿರಂಗ ಸಭೆ ಸ್ಥಳದಲ್ಲಿ ಬಾಂಬ್ ಸ್ಫೋಟಗೊಂಡಿದ್ದನ್ನು ಖಂಡಿಸಿ ಭಾನುವಾರ ಬಿಜೆಪಿ ಹಾವೇರಿ ಘಟಕದ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ನಡೆಸಿದರು. ನಗರದ ಬಿಜೆಪಿ ಕಾರ್ಯಾಲಯದಿಂದ ಆರಂಭಗೊಂಡ ಪ್ರತಿಭಟನಾ ರ್ಯಾಲಿ ಸಿದ್ದಪ್ಪ ವರ್ತುಳದವರೆಗೆ ತೆರಳಿತು. ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ಕೇಂದ್ರ ಹಾಗೂ ಬಿಹಾರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಾಡ ಬಾಂಬ್ ಸ್ಪೋಟದಲ್ಲಿ 5 ಜನ ಅಮಾಯಕರು ಸಾವೀಗಿಡಾಗಿದ್ದು, 27 ಜನರು ತೀವ್ರ ಗಾಯಗೊಂಡು ಆಸ್ಪತ್ರೆಗೆ ಸೇರಿರುವ ಘಟನೆಯನ್ನು ಬಲವಾಗಿ ಖಂಡಿಸಲಾಯಿತು. ಪ್ರತಿಭಟನೆ ನೇತೃತ್ವ ವಹಿಸಿದ್ದ ಪ್ರದೀಪ ಮುಳ್ಳೂರ ಮಾತನಾಡಿ, ನರೇಂದ್ರ ಮೋದಿಯವರ ರ್ಯಾಲಿ ಮತ್ತು ಬಹಿರಂಗ ಸಭೆ ನಡೆಯುವುದು ಗೊತ್ತಿದ್ದರೂ ಬಿಹಾರ ಸರ್ಕಾರ ಸೂಕ್ತ ಭದ್ರತೆ ಒದಗಿಸದೆ ಇದ್ದುದರಿಂದ ಐವರ ಸಾವಿಗೆ ನೇರ ಹೊಣೆಯಾಗಿದೆ ಎಂದು ದೂರಿದರು. ಸಮಾಜಘಾತಕ ಶಕ್ತಿಗಳ ಈ ಸಂಚು ತಿಳಿದುಕೊಳ್ಳುವಲ್ಲಿ ಕೇಂದ್ರದ ಗುಪ್ತಚರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದೂ ಆರೋಪಿಸಿದರು. ಜಿಲ್ಲಾ ವಕ್ತಾರ ಪ್ರಭು ಹಿಟ್ಟಳ್ಳಿ, ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತರಾಗಿರುವ ನರೇಂದ್ರ ಮೋದಿಯವರ ಜನಪ್ರಿಯತೆ ಸಹಿಸದ ಕೆಲ ದುಷ್ಟ ಶಕ್ತಿಗಳು ಇಂತಹ ಹೀನ ಕೃತ್ಯ ಎಸಗಿವೆ. ಇಂತಹ ಎಷ್ಟೇ ಸಂಚುಗಳು ನಡೆದರೂ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು. ದೇಶದ ರಕ್ಷಣೆ ಮಾಡುವಲ್ಲಿ ಯುಪಿಎ ವಿಫಲವಾಗಿದೆ. ಭವಿಷ್ಯದಲ್ಲಿ ಭಾರತ ಪಕ್ಕದ ರಾಷ್ಟ್ರಗಳ ಸಂಚಿಗೆ ಒಳಗಾಗದಂತೆ ನೋಡಿಕೊಳ್ಳಲು ನಮೋ ದೇಶದ ಪ್ರಧಾನಮಂತ್ರಿಯಾಗಲೇಬೇಕೆಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಮೃತರ ಆತ್ಮಕ್ಕೆ ಶಾಂತಿ ಕೋರಿ ಸಿದ್ದಪ್ಪ ವೃತ್ತದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಿದರು. ರಾಜ್ಯ ಕಾರ್ಯದರ್ಶಿ ಭಾರತಿ ಜಂಬಗಿ, ನಗರಸಭಾ ಸದಸ್ಯ ಹನುಮಂತ ನಾಯ್ಕ ಬದಾಮಿ, ಕರಬಸಪ್ಪ ಹಳದೂರ, ರೇಣುಕಾ ಪೂಜಾರ, ಗೀತಾ ಜುಜಗಾಂ, ಶಿವಲಿಂಗಪ್ಪ ಕಲ್ಯಾಣಿ, ಸೌಭಾಗ್ಯ ಹಿರೇಮಠ, ಜ್ಯೋತಿ ಸಾತೇನಹಳ್ಳಿ, ಯುವ ಮೂರ್ಚಾ ಪ್ರಧಾನ ಕಾರ್ಯದರ್ಶಿ ಸೋಮೇಶ ಕುರ್ಡೇಕರ, ನಗರ ಯುವ ಮೋರ್ಚಾ ಘಟಕದ ಅಧ್ಯಕ್ಷ ವೆಂಕಟೇಶ ದೈವಜ್ಞ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ಕರಬಸಮ್ಮನವರ,ನಗರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ರತ್ನ್ನಾ ಕಾಶಪ್ಪನವರ, ಲಕ್ಷ್ಮಣಸಿಂಗ್ ರಜಪೂತ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.