ಮಾರ್ಕೆಟ್ ಆಯ್ತು ಕಸಾಯಿಖಾನೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಅ. 27
ನಿತ್ಯ ಗೋವುಗಳನ್ನು ಪೂಜಿಸುವ ಸಂಪ್ರದಾಯಕ್ಕೆ ಅಂಟಿಕೊಂಡ ದೇಶದ ಸಂಸ್ಕೃತಿಗೆ ವಿರುದ್ಧ ನಿತ್ಯ ಜಾನುವಾರು ಮಾರಣ ಹೋಮ ನಡೆಸುವ ಕನಿಕರವಿಲ್ಲದ ಕಟುಕರ ವಿರುದ್ಧ ಕ್ರಮಕೈಗೊಳ್ಳುವ ಕಾನೂನು ಇಲ್ಲಿಲ್ಲ.
ಶಿಗ್ಗಾಂವಿ ಪಟ್ಟಣದ 14ನೇ ವಾರ್ಡಿನಲ್ಲಿ ಅನಧಿಕೃತವಾಗಿ ನಿತ್ಯ ಜಾನುವಾರುಗಳ ಮಾರಣ ಹೋಮ ನಡೆಯತ್ತಿದೆ. ಇಲ್ಲಿನ ಚರಂಡಿಯಲ್ಲಿ ಕೊಳಚೆ ನೀರಿನಕ್ಕಿಂತ ಜಾನುವಾರುಗಳ ಮಾರಣ ಹೋಮದ ರಕ್ತ ಹರಿಯುತ್ತಿದೆ. ಅಲ್ಲಲ್ಲಿ ತುಂಡರಿಸಿದ ಎಲುಬು, ಮಾಂಸ ರಾರಾಜಿಸುತ್ತಿದೆ.
ಮಟನ್ ಮಾರ್ಕೆಟ್ ಎಂದೇ ಹೇಳಲಾಗುತ್ತಿರುವ ಸ್ಥಳದಲ್ಲಿ ಜಾನುವಾರು ಹತ್ಯೆ ನಡೆಯತ್ತಿದೆ. ಮಾಂಸ ಮಾರಾಟ ಮತ್ತು ಕಸಾಯಿಖಾನೆಗಳು ಊರು ಹೊರ ವಲಯದಲ್ಲಿರಬೇಕು ಎಂಬ ಸರ್ಕಾರದ ನಿಯಮ ಇಲ್ಲಿ ಉಲ್ಲಂಘನೆಯಾಗಿದೆ. ಪಟ್ಟಣದ ಮಧ್ಯಭಾಗದಲ್ಲಿ ಪುರಸಭೆ ನಿರ್ಮಿಸಿಕೊಟ್ಟ ಮಾರುಕಟ್ಟೆ ಜಾನುವಾರುಗಳ ಹತ್ಯೆ ಸ್ಥಳವಾಗುತ್ತಿದೆ.
1985ರಿಂದ ಈಚೆಗೆ ಕೇವಲ ಮಟನ್ ಮಾರುಕಟ್ಟೆಗೆ ಇಲ್ಲಿ ಜಾಗೆ ನೀಡಲಾಗಿತ್ತು. ಮಾಂಸವನ್ನು ಬೇರೆಡೆ ಕಸಾಯಿಖಾನೆಯಿಂದ ತಂದು ಇಲ್ಲಿ ಮಾರುವ ನಿಯಮವನ್ನು ಈ ಹಿಂದೆ ಪುರಸಭೆ ಸ್ಥಳೀಯ ಆಡಳಿತ ಮಂಡಳಿ ಜಾರಿಗೊಳಿಸಿತ್ತು. ಮತ್ತೊಂದೆಡೆ 14ನೇ ವಿಭಾಗದ ಜನವಸತಿ ಕೂಡ ಬೆರಳೆಣಿಕೆಯಷ್ಟೇ ಇತ್ತು.
ಕಾಲ ಕಳೆದಂತೆ ಈ ವಿಭಾಗ ಹೈಟೆಕ್ ಸ್ಪರ್ಶ ಪಡೆದುಕೊಂಡಿದೆ. ಆದರೆ, ಮಧ್ಯಭಾಗದಲ್ಲಿರುವ ಕಸಾಯಿಖಾನೆ ಇಡೀ ಪ್ರದೇಶವನ್ನು ರೋಗಗ್ರಸ್ತವನ್ನಾಗಿಸಿದೆ. ಕಳೆದ ಅವಧಿಯ ಪುರಸಭೆ ಆಡಳಿತ ಮಂಡಳಿ, ತಮ್ಮ ರಾಜಕೀಯ ಇಚ್ಛಾಶಕ್ತಿಗೋಸ್ಕರ ಕೆಲ ಸದಸ್ಯರ ಒತ್ತಡಕ್ಕೆ ಮಣಿದು ಬಯಲಾಗಿದ್ದ ಮಾರುಕಟ್ಟೆಗೆ ಕಾಂಪೌಂಡ್ ನಿರ್ಮಿಸಿ ಸ್ವೇಚ್ಛಾಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಕಾಂಪೌಂಡ್, ಗೇಟು ನಿರ್ಮಾಣವಾಗಿದ್ದೇ ತಡ ಇದು ಕಸಾಯಿಖಾನೆಯಾಗಿದೆ. ಅಷ್ಟೇ ಅಲ್ಲ, ಹತ್ತಾರು ಅಂಗಡಿಗಳು ತಲೆ ಎತ್ತಿವೆ. ನಿತ್ಯ 10ಕ್ಕೂ ಹೆಚ್ಚು ಜಾನುವಾರುಗಳ ಹತ್ಯೆ ನಡೆಯುತ್ತಿದೆ. ಇದೆಲ್ಲ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು, ಆಡಳಿತ ಮಂಡಳಿ ಇಂದಿಗೂ ಅದು ಮಟನ್ ಮಾರ್ಕೆಟ್ ಎಂದೇ ವಾದಿಸುತ್ತಾರೆ.
ಆದರೆ, ಕಸಾಯಿಖಾನೆಯಿಂದ ಹರಿದು ಬರುವ ರಕ್ತ ಕಾಲುವೆ ಸೇರಿ ಹಂದಿ ನಾಯಿಗಳಿಗೆ ಆಹಾರವಾಗುತ್ತಿರುವುದಷ್ಟೇ ಅಲ್ಲ, ಸುತ್ತಲಿನ ಜನರಿಗೂ ರೋಗ ತಗಲುವ ಸೂಚನೆ ನೀಡಿದೆ.
ಎಲುಬು, ಮಾಂಸದ ತುಂಡುಗಳು ನಿತ್ಯ ಈ ಪ್ರದೇಶದ ಜನರ ಮನೆ ಬಾಗಿಲಿಗೆ ಪ್ರಸಾದದ ರೂಪದಲ್ಲಿ ಬರುತ್ತಿದೆ. ರೋಗ ಉಲ್ಬಣಕ್ಕೂ ಪೂರಕವಾಗಿದೆ.
ಈ ಕುರಿತಂತೆ ವಿಭಾಗದ ಜನತೆ ಕಳೆದ ಹಲವಾರು ವರ್ಷಗಳಿಂದ ಪುರಸಭೆ ಸೇರಿದಂತೆ ಲೋಕಾಯುಕ್ತ ಕಾರ್ಯಾಲಯಕ್ಕೂ ದೂರು ನೀಡಿದ್ದರೂ ಪರಿಣಾಮ ಮಾತ್ರ ಶೂನ್ಯ. ಸಂಬಂಧಪಟ್ಟ ಪರಿಸರ ಮತ್ತು ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪಟ್ಟಣದಿಂದ 3 ಕಿ.ಮೀ ದೂರ ಮಾಂಸ ಮಾರಾಟ ಕೇಂದ್ರ ನಡೆಸುವಂತೆ ಪುರಸಭೆಗೆ ನೊಟೀಸ್ ಜಾರಿ ಮಾಡಿತ್ತು.
ಇದನ್ನು ಸ್ಥಳೀಯ ಆಡಳಿತ ಮಂಡಳಿ ಗಮನಹರಿಸದೇ, ಕಸಾಯಿಖಾನೆ ವ್ಯಾಪಾರಿಗಳಿಗೆ ಸಹಕರಿಸಿದ್ದೇ ದುರಾದೃಷ್ಟ ಸಂಗತಿ. ಇಲ್ಲಿಂದ ಕರಾವಳಿ ಮತ್ತು ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಮಾಂಸ ಸಾಗಾಟ ಮಾಡುವ ಜಾಲ ನಿರಾತಂಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಶಿಗ್ಗಾಂವಿಗೆ ಕಪ್ಪು ಚುಕ್ಕೆಯಾಗಿದೆ.
ಎಚ್ಚೆತ್ತುಕೊಳ್ಳಬೇಕು: ಮಾಂಸ ಮಾರಾಟ ಮಳಿಗೆಯಲ್ಲಿ ಜಾನುವಾರುಗಳ ಹತ್ಯೆ ಮಾಡುತ್ತಿರುವ ಕಟುಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮುಂದಾಗಬೇಕು. ಜನರ ಮಧ್ಯ ವ್ಯಾಜ್ಯ ಸೃಷ್ಟಿಯಾಗುವ ಮೊದಲೇ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜಾನುವಾರು ಮಾರಣ ಹೋಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು.
-ಬಿ.ಎಸ್. ಹಿರೇಮಠ