ಶ್ರೀಕೃಷ್ಣನನ್ನು ನಿಮ್ಮ ಕಡೆಗೆ ತಿರುಗಿಸಿ ತೋರಿಸಿ
ರಾಣಿಬೆನ್ನೂರು: ವೈಷ್ಣವರೆಂದು ಜಂಭದಿಂದ ಹೇಳಿಕೊಳ್ಳುವ ನಿಮ್ಮಲ್ಲಿ ದೈವ ಬಲವಿದ್ದರೆ ಕನಕನ ಭಕ್ತಿಗೆ ಮೆಚ್ಚಿ ನಿಮಗೆ ಬೆನ್ನು ತೋರಿಸಿ ಕನಕನ ಕಡೆಗೆ ಮುಖ ಮಾಡಿ ನಿಂತಿರುವ ಶ್ರೀಕೃಷ್ಣನನ್ನು ನಿಮ್ಮ ಕಡೆಗೆ ತಿರುಗಿಸಿ ತೋರಿಸಿ ಎಂದು ಉಡುಪಿ ಪೇಜಾವರ ಶ್ರೀಗಳ ಹೇಳಿಕೆಗೆ ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದರು.
ತಾಲೂಕು ಕುರುಬ ನೌಕರರ ಸಂಘ, ಪ್ರದೇಶ ಕುರುಬರ ಸಂಘ ಹಾಗೂ ಕುರುಬರ ವಿವಿಧ ಸಂಘ ಸಂಸ್ಧೆಗಳ ಆಶ್ರಯದಲ್ಲಿ ನಗರದ ಹಲಗೇರಿ ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರು ಮತ್ತು ಸಮಾಜದ ಗಣ್ಯರ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಕ್ತ ಶ್ರೇಷ್ಠನೆಂಬ ಖ್ಯಾತಿಗೆ ಪಾತ್ರವಾಗಿರುವ ಕನಕದಾಸರು ಬಹುದೂರದಿಂದ ಭಕ್ತಿಯಿಂದ ನಡೆದುಕೊಂಡು ಉಡುಪಿಯ ಶ್ರೀಕೃಷ್ಣನ ದರ್ಶನಕ್ಕೆ ತೆರಳಿದ್ದ ಸಂದರ್ಭ ದೇವಸ್ಥಾನದಲ್ಲಿದ್ದ ವೈಷ್ಣವರು, ಕನಕದಾಸರಿಗೆ ಕೃಷ್ಣನ ದರ್ಶನ ಮಾಡಲು ಅವಕಾಶ ನೀಡುವ ಬದಲು, ಇಲ್ಲಸಲ್ಲದ ಮಾತುಗಳನ್ನಾಡಿ ಮನ ನೋಯಿಸಿದ್ದರು. ಕಾರಣ ಮನನೊಂದ ಕನಕದಾಸರು ದೇವಸ್ಥಾನದ ಹಿಂದೆ ನಿಂತು ಬೇಡಿಕೊಂಡಿದ್ದರಿಂದ ದೇವಸ್ಥಾನದ ಹಿಂದೆ ನಿಂತಿದ್ದ ಕನಕನ ಕಡೆಗೆ ಶ್ರೀಕೃಷ್ಣ ಮುಖಮಾಡಿ ತಮಗೆ ಬೆನ್ನು ತೋರಿಸುವುದರೊಂದಿಗೆ ಕನಕನಿಗೆ ಕೃಪೆ ತೋರಿಸಿದ.
ಕನಕನ ಕಿಂಡಿಯಿಂದಲೇ-ಹುಂಡಿ ತುಂಬಿಸಿಕೊಳ್ಳುತ್ತಾ ಮೆರೆಯುತ್ತಿದ್ದೆವೆಂಬುದನ್ನು ಪೇಜಾವರ ಶ್ರೀಗಳು ಮರೆಯಬಾರದು ಎಂದರು.
ಡೊಳ್ಳು ಬಾರಿಸುವುದರ ಮೂಲಕ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಆರ್. ಶಂಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ತಾಲೂಕು ಕುರುಬ ನೌಕರರ ಸಂಘದ ಅಧ್ಯಕ್ಷ ಜಿ.ಆರ್. ತಹಸೀಲ್ದಾರ್, ಕಾರ್ಯದರ್ಶಿ ಎನ್.ಎಂ. ಚೌಡಣ್ಣನವರ, ಡಾ. ಮೋಹನ ಹಂಡೆ, ಬೀರೇಶ್ವರ ದೇವಸ್ಥಾನದ ಪೂಜಾರಿ ಭರಮಪ್ಪ ಪೂಜಾರ, ನಗರಸಭಾ ಸದಸ್ಯ ಹನುಮಂತಪ್ಪ ದೇವರಗುಡ್ಡ, ನಿವೃತ್ತ ಪ್ರಾಚಾರ್ಯ ಮಹದೇವಪ್ಪ ಖನ್ನೂರು, ಕಂಬಳಿ ಸೊಸೈಟಿಯ ಚೇರಮನ್ ನಿಂಗಪ್ಪ ಗೌಡ್ರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ರಮೇಶ ಕರಡೆಣ್ಣನವರ, ಕೆ. ಶಿದ್ದಪ್ಪ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜದ 20 ಮುಖಂಡರಿಗೆ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ತರಗತಿಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ಸಮಾಜದ ಪ್ರತಿಭಾವಂತ 50 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.