ಶ್ರೀಕೃಷ್ಣನನ್ನು ನಿಮ್ಮ ಕಡೆಗೆ ತಿರುಗಿಸಿ ತೋರಿಸಿ: ನಿರಂಜನಾನಂದಪುರ ಶ್ರೀ
ಕ.ಪ್ರ. ವಾರ್ತೆ , ರಾಣಿಬೆನ್ನೂರು , ಅ.27
ವೈಷ್ಣವರೆಂದು ಜಂಭದಿಂದ ಹೇಳಿಕೊಳ್ಳುವ ನಿಮ್ಮಲ್ಲಿ ದೈವ ಬಲವಿದ್ದರೆ ಕನಕನ ಭಕ್ತಿಗೆ ಮೆಚ್ಚಿ ನಿಮಗೆ ಬೆನ್ನು ತೋರಿಸಿ ಕನಕನ ಕಡೆಗೆ ಮುಖ ಮಾಡಿರುವ ಶ್ರೀಕೃಷ್ಣನನ್ನು ನಿಮ್ಮ ಕಡೆಗೆ ತಿರುಗಿಸಿ ತೋರಿಸಿ ಎಂದು ಉಡುಪಿ ಪೇಜಾವರ ಶ್ರೀಗಳ ಹೇಳಿಕೆಗೆ ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದರು.
ತಾಲೂಕು ಕುರುಬ ನೌಕರರ ಸಂಘ, ಪ್ರದೇಶ ಕುರುಬರ ಸಂಘ ಹಾಗೂ ಕುರುಬರ ವಿವಿಧ ಸಂಘ ಸಂಸ್ಧೆಗಳ ಆಶ್ರಯದಲ್ಲಿ ನಗರದ ಹಲಗೇರಿ ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರು ಮತ್ತು ಸಮಾಜದ ಗಣ್ಯರ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಕ್ತ ಶ್ರೇಷ್ಠನೆಂಬ ಖ್ಯಾತಿಗೆ ಪಾತ್ರವಾಗಿರುವ ಕನಕದಾಸರು ಬಹುದೂರದಿಂದ ಭಕ್ತಿಯಿಂದ ನಡೆದುಕೊಂಡು ಉಡುಪಿಯ ಶ್ರೀಕೃಷ್ಣನ ದರ್ಶನಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ದೇವಸ್ಥಾನದಲ್ಲಿದ್ದ ವೈಷ್ಣವರು, ಕನಕದಾಸರಿಗೆ ಕೃಷ್ಣನ ದರ್ಶನ ಮಾಡಲು ಅವಕಾಶ ನೀಡುವ ಬದಲು, ಇಲ್ಲಸಲ್ಲದ ಮಾತುಗಳನ್ನಾಡಿ ಮನ ನೋಯಿಸಿದ್ದರು. ಆಗ ಮನನೊಂದ ಕನಕದಾಸರು ದೇವಸ್ಥಾನದ ಹಿಂದೆ ನಿಂತು ಬೇಡಿಕೊಂಡಿದ್ದರಿಂದ ದೇವಸ್ಥಾನದ ಹಿಂದೆ ನಿಂತಿದ್ದ ಕನಕನ ಕಡೆಗೆ ಶ್ರೀಕೃಷ್ಣ ಮುಖಮಾಡಿ ತಮಗೆ ಬೆನ್ನು ತೋರಿಸಿದ. ಕನಕನ ಕಿಂಡಿಯಿಂದಲೇ-ಹುಂಡಿ ತುಂಬಿಸಿಕೊಳ್ಳುತ್ತಾ ಮೆರೆಯುತ್ತಿರುವೆ ಎಂಬುದನ್ನು ಪೇಜಾವರ ಶ್ರೀಗಳು ಮರೆಯಬಾರದು ಎಂದರು.