ಸೂಕ್ತ ತರಬೇತಿಯಿಂದ ಉದ್ಯೋಗಸ್ಥರಾಗಿ: ಜಗದೀಶ
ಹಾನಗಲ್ಲ: ಸ್ವಯಂ ಉದ್ಯೋಗ ಮತ್ತು ಮಹಿಳಾ ಆರ್ಥಿಕ ಸಬಲೀಕರಣ ಇಂದಿನ ಆದ್ಯತೆಯಾಗಿದ್ದು, ಸೂಕ್ತ ತರಬೇತಿ ಮೂಲಕ ಸ್ಥಳೀಯವಾಗಿ ಉದ್ಯೋಗ ಆರಂಭಿಸುವತ್ತ ಗ್ರಾಮೀಣ ಭಾಗದ ಮಹಿಳೆಯರು ಗಮನ ನೀಡಬೇಕು ಎಂದು ಧಾರವಾಡ ರುಡ್‌ಸೆಟ್ ಸಂಸ್ಥೆ ಉಪನ್ಯಾಸಕ ಜಗದೀಶ ಪೂಜಾರ ಹೇಳಿದರು.
ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಂತಿಸ್ವಾಮಿ ಜ್ಞಾನ ವಿಕಾಸ ಕೇಂದ್ರದ ಅಡಿಯಲ್ಲಿ ನಡೆದ ಸ್ವ-ಉದ್ಯೋಗ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿ, ಹೈನುಗಾರಿಕೆ, ಕುರಿ ಸಾಕಾಣಿಕೆ, ಕಂಪ್ಯೂಟರ್, ಮೊಬೈಲ್ ರಿಪೇರಿ, ಬ್ಯೂಟಿ ಪಾರ್ಲರ್ ಇಂತಹ ತರಬೇತಿಗಳನ್ನ್ನು ಧಾರವಾಡದ ರುಡ್‌ಸೆಟ್ ಸಂಸ್ಥೆಯಿಂದ ನೀಡಲಾಗುತ್ತಿದ್ದು, ತರಬೇತಿ ನಂತರ ಸಾಲ ಸೌಲಭ್ಯಗಳ ಮೂಲಕ ಸ್ವ-ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ತಾಲೂಕು ಸಮನ್ವಯಾಧಿಕಾರಿ ಭಾರತಿ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿ, ಸ್ವ-ಉದ್ಯೋಗದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವ ಮೂಲಕ ಮಹಿಳೆಯರಲ್ಲಿ ಆರ್ಥಿಕ ಪ್ರಗತಿಯ ಜ್ಞಾನ ವೃದ್ಧಿಗೊಳ್ಳುತ್ತದೆ. ಸಂಸ್ಥೆಗಳ ಉಚಿತ ಉದ್ಯೋಗ ತರಬೇತಿಯ ಸೌಲಭ್ಯಗಳನ್ನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು. ಕೂಡಲ ಗ್ರಾಪಂ ಅಧ್ಯಕ್ಷೆ ಶಾಂತವ್ವ ಗದ್ದಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ಶಿಲ್ಪಾ ಭಾಗವಹಿಸಿದ್ದರು. ಸಾವಿತ್ರಿ ಪರಶೆಟ್ಟಿ ಸ್ವಾಗತಿಸಿದರು. ಕವಿತಾ ಶೆಟ್ಟರ್ ನಿರೂಪಿಸಿದರು. ಗಾಯತ್ರಿ ಹೊಂಬಳಿ ವಂದಿಸಿದರು.
--