ಹುಲಗೂರು ಪಟ್ಟಣ ಪಂಚಾಯಿತಿ ಮಾಡಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಅ. 27
ತಾಲೂಕಿನಲ್ಲಿಯೇ ದೊಡ್ಡದಾದ ಗ್ರಾಮ ಪಂಚಾಯಿತಿಯಾಗಿರುವ ಹುಲಗೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಎಂದು ಘೋಷಣೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ತಾಲೂಕಿನ ಹುಲಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕೇವಲ ಹುಲಗೂರು ಒಂದೇ ಗ್ರಾಮವಾಗಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಗ್ರಾಮವಾಗಿದೆ. ತಕ್ಷಣ ಪಂಚಾಯಿತಿಯನ್ನು ಮೇಲ್ದರ್ಜೇಗೆರಿಸಿ ಪಟ್ಟಣ ಪಂಚಾಯಿತಿ ಮಾಡಿ ಗ್ರಾಮದ ಹೆಚ್ಚಿನ ಅಭಿವೃದ್ದಿಗೆ ಒತ್ತು ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ತಾಲೂಕಿನ ಹುಲಗೂರು ಗ್ರಾಮ ಪಂಚಾಯಿತಿ 21 ಜನ ಸದಸ್ಯರನ್ನು ಹೊಂದಿದ್ದು, ಪಂಚಾಯಿತಿ ವ್ಯಾಪ್ತಿಗೆ ಯಾವುದೇ ಸಣ್ಣ ಗ್ರಾಮಗಳನ್ನು ಕೂಡಿಕೊಂಡಿರುವುದಿಲ್ಲ. ಬಹುಸಂಖ್ಯೆ ಸದಸ್ಯರನ್ನು ಹೊಂದಿದ ಗ್ರಾಮವಾಗಿದ್ದು, ಗ್ರಾಮದಲ್ಲಿ ಎಪಿಎಂಸಿ ಉಪ ಮಾರುಕಟ್ಟೆಯನ್ನು ಹೊಂದಿದೆ. ವಿವಿಧ ಬ್ಯಾಂಕ್‌ಗಳ ಶಾಖೆಗಳನ್ನೂ ಹೊಂದಿದ್ದು, 5 ತಾಲೂಕು ಕೇಂದ್ರಗಳಾದ ಶಿಗ್ಗಾಂವಿ, ಸವಣೂರು, ಲಕ್ಷ್ಮೇಶ್ವರ, ಕುಂದಗೋಳ, ಹುಬ್ಬಳ್ಳಿ ಒಳಗೊಂಡ ಕೇಂದ್ರ ಸ್ಥಾನವಾಗಿದೆ.
ಶೈಕ್ಷಣಿಕವಾಗಿ ಎರಡು ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗಳು, 2 ಕನ್ನಡ ಶಾಲೆಗಳು, ಉದು ಮತ್ತು ಕನ್ನಡ ಎರಡು ಪ್ರೌಢಶಾಲೆಗಳನ್ನು ಹೊಂದಿದ್ದು, ಸುಮಾರು 3-4 ಉರ್ದು ಮತ್ತು ಕನ್ನಡ ಕಾನ್ವೆಂಟ್‌ಗಳನ್ನೂ ಹೊಂದಿದೆ. ಹೆಸ್ಕಾಂ ವಿದ್ಯುತ್ ಶೇಖರಣಾ ಕೇಂದ್ರವನ್ನು ಹೊಂದಿದೆ.
ವಿವಿಧ ವ್ಯಾಪಾರಗಳಿಗೂ ಕೇಂದ್ರ ಸ್ಥಾನವಾದ ಗ್ರಾಮ ಇನ್ನೂ ಹೆಚ್ಚಿನ ಅಭಿವೃದ್ದಿಗೆ ಪಟ್ಟಣ ಪಂಚಾಯಿತಿ ಎಂದು ಘೋಷಣೆಯಾದರೆ ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೇಖಣ್ಣಾ ಗಣಾಚಾರಿ ತಿಳಿಸಿದ್ದಾರೆ.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮರೇಂಬಿ ನೇರ್ತಿ, ಉಪಾಧ್ಯಕ್ಷೆ ರತ್ನವ್ವ ಸಂಶಿ, ಶೇಖಣ್ಣಾ ಗಣಾಚಾರಿ, ಸಯ್ಯದ್ ಕಲೀಹುದ್ದಿನ ಎಸ್. ಖಾದ್ರಿ, ಮಮ್ಮದಗೌಸ್ ಕಳ್ಳಿಮನಿ, ರುದ್ರಪ್ಪ ಕೆಳಗಿನಮನಿ, ಬಾಬುಸಾಬ ಚಂದರಗಿ, ಜಾವೇದ ಸವಣೂರು, ಖಾದರಗೌಸ್ ನೇರ್ತಿ, ರೀಯಾಜ್ ಅಹಮದ್ ಮುಲ್ಲಾ ಇತರ ಸದಸ್ಯರು ಆಗ್ರಹಿಸಿದ್ದಾರೆ.