ಇಂದಿನಿಂದ ಮತಪಟ್ಟಿ ಪರಿಷ್ಕರಣೆ
ಹಾವೇರಿ: ಚುನಾವಣಾ ಆಯೋಗದ ನಿರ್ದೇಶನದಂತೆ ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಅ. 30ರಿಂದ ನ. 29ರ ತನಕ ನಡೆಯಲಿದ್ದು, 2014ರ ಜ. 1ಕ್ಕೆ 18 ವರ್ಷ ತುಂಬುವ ಅರ್ಹ ಮತದಾರರು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದು. ಹೆಸರು ಸೇರ್ಪಡೆಗೆ ನಮೂನೆ 6, ಕೈಬಿಡಲು ನಮೂನೆ 7 ಹಾಗೂ ತಿದ್ದುಪಡಿ ಹಾಗೂ ನಮೂನೆ 8ಎ ಯಲ್ಲಿ ವರ್ಗಾವಣೆ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಬಹುದು. ಅ. 30ರಂದು ಜಿಲ್ಲಾದ್ಯಂತ ಮತಗಟ್ಟೆ, ಮತದಾರರ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕರಡು ಪಟ್ಟಿ ಪ್ರಕಟಿಸಲಾಗುವುದು. ಸಾರ್ವಜನಿಕರು ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಪರಿಶೀಲಿಸಬೇಕು. ನ. 5ರಿಂದ 8ರ ವರೆಗೆ ಭಾವಚಿತ್ರವುಳ್ಳ ಮತದಾರರ ಪಟ್ಟಿಗಳ ಭಾಗ ಸಂಖ್ಯೆ ಹಾಗೂ ವಿಭಾಗಗಳನ್ನು ಗ್ರಾಮಸಭೆ /ಸ್ಥಳೀಯ ಸಂಸ್ಥೆ/ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮತದಾರರ ಹೆಸರುಗಳನ್ನು ಓದಿ ಹೇಳಿ, ಹೆಸರು ಪರಿಶೀಲಿಸಲಾಗುವುದು. ನ. 3, 10 ಹಾಗೂ 17ರಂದು (ಭಾನುವಾರ) ವಿಶೇಷ ಕಾರ್ಯಾಚರಣೆ ನಡೆಸಿ, ಹಕ್ಕು, ಆಕ್ಷೇಪಣೆಗಳನ್ನು ಪಡೆಯುವ ಬಗ್ಗೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಡಿ. 21ರಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು. ಡಿ. 21ರಿಂದ 31ರ ವರೆಗೆ ಮತದಾರರ ಪಟ್ಟಿಯ ಡಾಟಾ ಬೇಸ್ ಹಾಗೂ ಕಂಟ್ರೋಲ್ ಟೇಬಲ್ ಕಾಲೋಚಿತಗೊಳಿಸಿ, ಪುರವಣಿ ಮತದಾರರ ಪಟ್ಟಿ ತಯಾರಿಸಿ ಮುದ್ರಿಸಲಾಗುವುದು. ಜ. 6ರಂದು ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆ ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.