ಕೋಲ್‌ಗೇಟಲ್ಲಿ ಪ್ರಧಾನಿ: ಖಂಡನೆ
ಹಾವೇರಿ: ಕಲ್ಲಿದ್ದಲು ಹಗರಣದಲ್ಲಿ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್ ಶಾಮೀಲಾಗಿದ್ದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ಘಟಕದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಎಬಿವಿಪಿ ರಾಜ್ಯ ಘಟಕ ಪ್ರತಿಭಟನೆಗೆ ಕರೆ ನೀಡಿದರ ಭಾಗವಾಗಿ ಹಾವೇರಿ ಘಟಕದ ಕಾರ್ಯಕರ್ತರು ಮಧ್ಯಾಹ್ನ 12ಕ್ಕೆ ನಗರ ಪೊಲೀಸ್ ಠಾಣೆ ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಹೊಸಮನಿ ಸಿದ್ದಪ್ಪ ವರ್ತುಳದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ ಮಾತನಾಡಿ, ಕಲ್ಲಿದ್ದಲು ಹಗರಣದ ಆರೋಪ ಮತ್ತೊಮ್ಮೆ ಪ್ರಧಾನಿ ಅವರ ಮುಂದೆ ಬಂದು ನಿಂತಿದೆ. ಮಾಜಿ ಸಚಿವ ಪಿ.ಸಿ. ಫಾರಿಕ್ ಅವರ ಹೇಳಿಕೆ, ಹಗರಣದಲ್ಲಿ ಪ್ರಧಾನಿ ಅವರ ಇರುವಿಕೆಯನ್ನು ಸಾಬೀತುಪಡಿಸಿದೆ. ಒಂದರ್ಥದಲ್ಲಿ ಕಲ್ಲಿದ್ದಲು ಹಗರಣದಲ್ಲಿ ಪ್ರಧಾನಿ ಪಾತ್ರವಿರುವುದು ದೃಢಪಡುತ್ತದೆ. ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರಧಾನಮಂತ್ರಿ ರಾಜಿನಾಮೆಗೆ ಆಗ್ರಹಿಸಿ ಎಬಿವಿಪಿ ಹೋರಾಟ ಹಮ್ಮಿಕೊಂಡಿದೆ ಎಂದರು. ಪ್ರಧಾನಿಯಿಂದ ನಡೆದಿರುವ ತಪ್ಪನ್ನು ಸಿಬಿಐ ಮಾಜಿ ಸಚಿವ ಫಾರಿಕ್‌ಗೆ ಕಟ್ಟಲು ಯತ್ನಿಸುತ್ತಿದೆ. ಯುಪಿಎ ಸರ್ಕಾರದ ಹಗರಣಗಳಲ್ಲಿ ದೇಶದ ದೊಡ್ಡ-ದೊಡ್ಡ ಉದ್ಯಮಿಗಳನ್ನು ಉಳಿಸುವ ಪ್ರಯತ್ನವನ್ನೂ ಸಿಬಿಐ ಮಾಡುತ್ತಿದೆ ಎಂದು ಆರೋಪಿಸಿದರು.
ಇದು ದೇಶದ್ರೋಹಿ ಕೃತ್ಯವಾಗಿದ್ದು, ಯುಪಿಎ ಸರ್ಕಾರದ ಹತ್ತಾರು ಹಗರಣಗಳ ವಿರುದ್ಧ 4 ವರ್ಷಗಳಿಂದ ಎಬಿವಿಪಿ ನಿರಂತರ ಹೋರಾಟ ನಡೆಸಿದೆ. ದೇಶದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವನ್ನು ಬುಡ-ಸಮೇತ ಕಿತ್ತೆಸೆಯಲು ದೇಶದ ಸಮಸ್ತ ವಿದ್ಯಾರ್ಥಿ ಸಮೂಹಕ್ಕೆ ಒಂದಾಗಬೇಕೆಂದರು. ಸಂಚಾಲಕ ಪಟ್ಟರಾಜ ಮೊಗಳಿ, ನಗರ ಕಾರ್ಯದರ್ಶಿ ದೀಪಕ್ ಹೆಬ್ಬಾರ, ನಗರ ಸಹ ಕಾರ್ಯದರ್ಶಿ ಫಕ್ಕೀರಗೌಡ ಭರಮಗೌಡ್ರ, ಆಂಜನೇಯ, ಮಂಜುನಾಥ, ಚಂದ್ರಶೇಖರ, ಎಸ್.ವಿ. ಇಂಡಿಪೆಂಡೆನ್ಸ್ ಕಾಲೇಜು ಮತ್ತು ಕೀರ್ತಿ ಐಟಿಐ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.