ಹೆದ್ದಾರಿ ತಡೆದ ರೈತರ ಬಂಧನ, ಬಿಡುಗಡೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಅ. 29
ಕಬ್ಬಿಗೆ ಯೋಗ್ಯ ಬೆಲೆ ನೀಡಬೇಕು ಹಾಗೂ ಕಳಪೆ ಬಿತ್ತನೆ ಬೀಜ ವಿತರಿಸಿದ ಮಹಿಕೋ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕಿನ ಮಾಕನೂರು ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ 450 ರೈತರನ್ನು ಪೊಲೀಸರು ಮಂಗಳವಾರ ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
ಕಬ್ಬಿಗೆ ಯೋಗ್ಯ ಬೆಲೆ ನೀಡದೆ, ಸಕ್ಕರೆ ಬೆಲೆಯನ್ನು ಗಗನಕ್ಕೇರಿಸಿ ಹಾವೇರಿ ಜಿಲ್ಲೆಯ ಸಂಗೂರು ಹಾಗೂ ದಾವಣಗೆರೆ ಜಿಲ್ಲೆಯ ಹಳೆಬಾತಿ ಗ್ರಾಮದಲ್ಲಿರುವ ಕಬ್ಬು ನುರಿಸುವ ಕಾರ್ಖಾನೆಗಳು ರೈತರಿಗೆ ಮೋಸ ಮಾಡುತ್ತಿವೆ. ಮಹಿಕೋ ಕಂಪನಿ, ಬಿಟಿ ತಳಿಯ ಕಳಪೆ ಹತ್ತಿ ಬೀಜಗಳನ್ನು ವಿತರಿಸಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳ ರೈತರು ಆಗ್ರಹಿಸಿದರು.
ಉತ್ತರ ಕರ್ನಾಟಕದ ಹೆಬ್ಬಾಗಿಲೆಂದು ಕರೆಯಲಾಗುವ ತಾಲೂಕಿನ ಕುಮಾರಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಮಾಕನೂರು ಗ್ರಾಮದ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಂಗಳವಾರ ಜಮಾಯಿಸಿದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಹಿರೇಕೆರೂರು, ಹಾನಗಲ್ಲ, ಬ್ಯಾಡಗಿ ತಾಲೂಕಿನಿಂದ ಆಗಮಿಸಿದ್ದ ಹತ್ತಿ ಬೆಳೆಗಾರರು ಮತ್ತು ದಾವಣಗೆರೆ ಜಿಲ್ಲೆಯ ಹರಿಹರ, ಮಲೆಬೆನ್ನೂರು, ಕುಂಬಳೂರು, ಕೊಂಡಜ್ಜಿ, ಹೊಳೆಸಿರಿಗೇರಿ, ರಾಜನಹಳ್ಳಿ, ನಂದಿಗಾವಿ ಗ್ರಾಮಗಳ ಕಬ್ಬು ಬೆಳೆಗಾರರು ಹೆದ್ದಾರಿ ತಡೆ ನಡೆಸಿದರು.
ಸುದ್ದಿ ತಿಳಿದು ಹಾವೇರಿ ಉಪ ವಿಭಾಗಾಧಿಕಾರಿ ಮಹಮ್ಮದ್ ಝಬೇರ್, ರಾಣಿಬೆನ್ನೂರು ತಹಸೀಲ್ದಾರ್ ಹನುಮಂತಪ್ಪ ಬಡದಾಳ, ಡಿವೈಎಸ್ಪಿ ಗಡಾದ, ಕುಮಾರಪಟ್ಟಣ ಪಿಎಸ್ಐ ಸಂತೋಷ ಪಾಟೀಲ ಸ್ಥಳಕ್ಕೆ ಆಗಮಿಸಿ, ಪ್ರತಿಭಟನೆಗೆ ಮುಂದಾಗಿದ್ದ ರೈತರೊಂದಿಗೆ ಚರ್ಚಿಸಿದರು.
ಹಾವೇರಿ ಜಿಲ್ಲೆಯ ಸಂಗೂರು, ದಾವಣಗೆರೆ ಜಿಲ್ಲೆಯ ಹಳೆಬಾತಿ (ಕುಂದುವಾಡ) ಸಕ್ಕರೆ ಕಾರ್ಖಾನೆ ಹಾಗೂ ಕಮದೋಡ ಗ್ರಾಮದ ಹತ್ತಿರವಿರುವ ಮಹಿಕೋ ಬೀಜ ಕಂಪನಿಯ ಅಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿ, ಸ್ಥಳಕ್ಕೆ ಬಂದು ರೈತರ ಸಮಸ್ಯೆಗೆ ಉತ್ತರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇದಕ್ಕೆ ಒಪ್ಪಿದ್ದ ಸಕ್ಕರೆ ಕಾರ್ಖಾನೆ ಹಾಗೂ ಬೀಜ ಕಂಪನಿ ಅಧಿಕಾರಿಗಳು ಎರಡು ತಾಸು ಕಳೆದರೂ ಸ್ಥಳಕ್ಕೆ ಬಾರದೇ ಇದ್ದಾಗ ತಾಳ್ಮೆ ಕಳೆದುಕೊಂಡ ರೈತರು ಘೋಷಣೆ ಕೂಗಲಾರಂಭಿಸಿದರು. ಆಗ 450 ರೈತರನ್ನು ಬಂಧಿಸಿದ ಪೊಲೀಸರು, ಕುಮಾರಪಟ್ಟಣಂ ಪೊಲೀಸ್ ಠಾಣೆಗೆ ಕರೆದೊಯ್ದು ಬಿಡುಗಡೆಗೊಳಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ಮಾತನಾಡಿ, ರೈತರು ಕಷ್ಟಪಟ್ಟು ಬೆಳೆದ ಕಬ್ಬಿಗೆ ಕಾರ್ಖಾನೆಯವರು ನೀಡುವ ಹಣ ಯಾತಕ್ಕೂ ಸಾಲದು. ಕಡಿಮೆ ಬೆಲೆಗೆ ಕಬ್ಬು ಖರೀದಿಸಿ, ಸಕ್ಕರೆ ತಯಾರಿಸಿ, ಹೆಚ್ಚಿನ ಬೆಲೆಗೆ ಮಾರಿ ಶ್ರೀಮಂತವಾಗುವ ಕಾರ್ಖಾನೆಗಳು ರೈತರಿಂದ ಖರೀಸುವ ಪ್ರತಿ ಟನ್ ಕಬ್ಬಿಗೆ ರು. 2,400, ಕಟಾವಿಗೆ ರು. 300 ಹಾಗೂ ಸಾಗಾಣಿಕೆ ವೆಚ್ಚ ರು. 300 ಸೇರಿ, ಪ್ರತಿ ಟನ್ಗೆ ಒಟ್ಟು ರು. 3000 ನೀಡಬೇಕು.
ಅಲ್ಲದೆ, ಮಹಿಕೋ ಕಂಪನಿಯ ಬಿಟಿ ಹತ್ತಿ ಬೀಜಗಳಾದ ಕನಕ, ನಿಕ್ಕಿ ಪ್ಲಸ್ಗಳು ಕಳಪೆಯಾಗಿದ್ದು, ಹಾನಿ ಅನುಭವಿಸಿದ ರಾಜ್ಯದ ಸಾವಿರಾರು ರೈತರಿಗೆ ಪ್ರತಿಡಬ್ಬ ಬೀಜಕ್ಕೆ ರು. 45 ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಸರಗಣಾಚಾರಿ, ರಾಜ್ಯ ಉಪಾಧ್ಯಕ್ಷ ಶ್ಯಾಂಸುಂದರ ಕೀರ್ತಿ, ರಾಜ್ಯಾಧ್ಯಕ್ಷ ಜಿ.ಎ. ಲಕ್ಷ್ಮೀನಾರಾಯಣ ಗೌಡ, ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ರವಿಕುಮಾರ, ಬೇಡರಡ್ಡಿಹಳ್ಳಿ ಬಸವರಡ್ಡಿ, ಶಾಮಸುಂದರ ಕೀರ್ತಿ, ವಾಸನ ಓಂಕಾರಪ್ಪ, ಮಾಕನೂರಿನ ಹನುಮಂತಪ್ಪ ಕಬ್ಬಾರ, ಈರಣ್ಣ ಹಲಗೇರಿ, ರಾಜಶೇಖರ ದೂದಿಹಳ್ಳಿ, ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ಮುಂತಾದವರು ಪ್ರತಿಭಟನೆಯಲ್ಲಿದ್ದರು.