ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಳೆ: ರೈತರ ಬವಣೆಗಿಲ್ಲ ಕೊನೆ

Vishwanath S
Updated On : 31 Oct 2013, 11:58 am

ಕನ್ನಡಪ್ರಭ ವಾರ್ತೆ, ಹಾವೇರಿ, ಅ. 30
ಜಿಲ್ಲಾದ್ಯಂತ ವರುಣನ ರುದ್ರನರ್ತನ ತಣ್ಣಗಾಗಿ ತಿಂಗಳೆ ಕಳೆದರೂ ರೈತರ ಹಾಗೂ ಶ್ರೀಸಾಮಾನ್ಯರ ಬವಣೆ ಮಾತ್ರ ಇನ್ನೂ ತಪ್ಪಿಲ್ಲ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ವಾರದ ಮುಂಚೆಯೇ ಜಿಲ್ಲೆಯಲ್ಲಿ ಅವತರಿಸಿದ್ದರಿಂದ ರೈತಾಪಿ ವರ್ಗದವರು ಹಾಗೂ ಶ್ರೀಸಾಮಾನ್ಯರು ಸಂತಸದಲ್ಲಿ ತೇಲಾಡಿದ್ದರು. ಆಮೇಲೆ ವರುಣದೇವ ವಕ್ರದೃಷ್ಟಿ ಬೀರಿದ್ದರಿಂದ ರೈತರು, ಜನತೆ ಸಾಕಪ್ಪ ಸಾಕು ಎಂದು ಉದ್ಘಾರ ತೆಗೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜಿಲ್ಲಾಡಳಿತ ತನ್ನ ಪಾಲಿನ ಕರ್ತವ್ಯ ನಿಭಾಯಿಸಲು ಸಾಕಷ್ಟು ಪ್ರಾಮಾಣಿಕವಾಗಿಯೇ ಪ್ರಯತ್ನಿಸಿತ್ತು. ಆದರೆ, ರೈತರು ಹಾಗೂ ಎಲ್ಲ ವರ್ಗದ ಜನರನ್ನು ಅತಿವೃಷ್ಟಿಯಿಂದ ಪಾರು ಮಾಡಲು ಸರ್ಕಾರದ ಅನುದಾನಕ್ಕಾಗಿ ಕೈಚಾಚಬೇಕಾಯಿತು.
ಬೆಳೆ ಹಾನಿಗೆ ತಕ್ಷಣ ಪರಿಹಾರ ನೀಡುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ರೈತ ಸಂಘಟನೆಗಳು ಸಂಘಟಿತ ಹೋರಾಟ ಕೈಗೊಂಡಿದ್ದರಿಂದ ತುಸು ಎಚ್ಚೆತ್ತುಕೊಂಡ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರದಿಂದ ಮೂಗಿಗೆ ತಪ್ಪು ಸವರಿದಂತೆ ಒಂದಿಷ್ಟು ಅನುದಾನ ಬಿಡುಗಡೆ ಆಯಿತು.
ಮಳೆಯ ಪ್ರಭಾವದಿಂದ ಮನೆ, ಮಠ ಹಾಗೂ ಜಾನುವಾರು ಜೀವಹಾನಿ ಸಂಭವಿಸಿದವರೂ ಪರಿಹಾರ ನೀಡುವಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಮೊರೆ ಹೋಗಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಬೆಳೆ ಹಾನಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಯತ್ನಿಸಿದ್ದರು. ಆದರೆ, ಖಾಸಗಿ ಆಸ್ತಿ ಮಾಲೀಕರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಸರ್ಕಾರದ ಅನುಮತಿ ಹಾಗೂ ಅನುದಾನಕ್ಕೆ ಕಾಯಬೇಕಾಗಿದ್ದು ಕಟುವಾಸ್ತವ. ಹೀಗಾಗಿ, ಜಿಲ್ಲೆಯಲ್ಲಿ ಮಳೆಯಿಂದ ಧರೆಗೆ ಉರುಳಿರುವ ಮನೆಗಳ ಮಾಲೀಕರಿಗೆ ದುರಸ್ತಿ ಮಾಡಿಸಿಕೊಳ್ಳಲು ಸಾಧ್ಯವಾಗದೇ ಬಿದ್ದ ಮನೆಗಳಲ್ಲೇ ವಾಸಿಸುವ ಅನಿವಾರ್ಯತೆ ಎದುರಾಗಿದೆ.
ರು. 499.46 ಲಕ್ಷ
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ, ಆಸ್ತಿ-ಪಾಸ್ತಿ ಹಾನಿ ಹಾಗೂ ಜಾನುವಾರು ಜೀವ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ವಿವಿಧ ಇಲಾಖೆ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ, ಅಂದಾಜು ರು. 499.45 ಲಕ್ಷ ಹಾನಿಯಾಗಿರುವ ಬಗ್ಗೆ ಒಂದೂವರೆ ತಿಂಗಳ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಈ ಪೈಕಿ 49.54 ಹೆಕ್ಟೇರ್ ಬೆಳೆಹಾನಿಯಾಗಿದ್ದರೆ, 3,582 ಸಾರ್ವಜನಿಕ ಆಸ್ತಿಪಾಸ್ತಿಗೆ ದೊಡ್ಡ ಹಾಗೂ ಸಣ್ಣ ಪ್ರಮಾಣದಲ್ಲಿ ಧಕ್ಕೆಯಾಗಿದೆ. ಈ ನಷ್ಟ ರು. 35 ಲಕ್ಷ ಎಂದು ಅಂದಾಜಿಸಲಾಗಿದೆ. ಜಿಲ್ಲಾದ್ಯಂತ ಒಟ್ಟು 10,729 ಮನೆಗಳು ಧರೆಗೆ ಉರುಳಿದ್ದು, ಅಂದಾಜು 81.02 ಲಕ್ಷ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ರು. 120 ಲಕ್ಷ ಮಾತ್ರ
ಸುಮಾರು 5 ಕೋಟಿ ಹಾನಿಯಾಗಿದ್ದರೂ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ರು. 120 ಲಕ್ಷ ಮಾತ್ರ. ಇದರಿಂದಾಗಿ ಎಲ್ಲ ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ. ಬೆಳೆಹಾನಿಗೆ ಪರಿಹಾರ ನೀಡಲು ಪ್ರಕೃತಿ ವಿಕೋಪ ನಿಧಿಯಲ್ಲಿ ಸಾಕಷ್ಟು ಹಣ ಕಾಯ್ದಿರಿಸಲಾಗಿದೆ. ಆದರೆ, ಶ್ರೀಸಾಮಾನ್ಯರಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ಆಗಿರುವ ಹಾನಿಗೆ ಪರಿಹಾರ ಕಲ್ಪಿಸಬೇಕಾದರೆ ಸರ್ಕಾರವೇ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೇ ಇರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಕುದುರೆ ಸವಾರಿ
ಜಿಲ್ಲೆಯ ಪ್ರಮುಖ ರಸ್ತೆಗಳು ಮಳೆಯಿಂದ ಸಾಕಷ್ಟು ಹಾನಿಗೊಳಗಾಗಿವೆ. ಅವುಗಳಲ್ಲಿ ಸಂಚರಿಸುವುದೆಂದರೆ ಕುದುರೆ ಸವಾರಿ ಮಾಡಿದ ಅನುಭವ ಆಗುತ್ತದೆ. ಸರ್ಕಾರ, ಜಿಲ್ಲಾಡಳಿತ ನೀಡಿದ ವರದಿಗೆ ಸ್ಪಂದಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರ ಪರಿಣಾಮವನ್ನು ಜನತೆ ಅನುಭವಿಸುವಂತಾಗಿದೆ ಎಂದು ನಗರದ ನಿವಾಸಿ ಬಸಪ್ಪ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಚಕಾರ ಎತ್ತುತ್ತಿಲ್ಲ
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಇಷ್ಟೊಂದು ದೊಡ್ಡ ಪ್ರಮಾಣದ ಹಾನಿ ಸಂಭವಿಸಿದ್ದರೂ ಆಡಳಿತ ಪಕ್ಷದ ನಾಲ್ವರು ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಅಭಿವೃದ್ಧಿಗೆ ಬೇಕಾಗಿರುವ ಅನುದಾನ ತರಲು ಪ್ರಯತ್ನಿಸುತ್ತಿಲ್ಲ. ಇದು ನಗರದ ಬಗ್ಗೆ ಅವರಿಗಿರುವ ಕಾಳಜಿ ತೋರಿಸುತ್ತದೆ. ಈಗಲಾದರೂ ಪರಿಹಾರ ಕಲ್ಪಿಸಲು ಅವರು ಮುಂದಾಗುವರೇ?
ವರದಿ ಕಳುಹಿಸಿದ್ದೇವೆ
ಬೆಳೆ, ಜಾನುವಾರು, ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಖಾಸಗಿ ಮನೆಗಳ ಹಾನಿಗೆ ಸಂಬಂಧಿಸಿ ಜಿಲ್ಲಾಡಳಿತ, ರು. 5 ಕೋಟಿ ಅಂದಾಜು ಹಾನಿ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದೆ. ಬೆಳೆಹಾನಿಗೆ ಪರಿಹಾರ ನೀಡಲು ಪ್ರಕೃತಿ ವಿಕೋಪ ನಿಧಿಯಲ್ಲಿ ಸಾಕಷ್ಟು ಹಣವಿದ್ದು, ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಹಾನಿಗೆ ಪರಿಹಾರ ನೀಡಬೇಕಾದರೆ ಸರ್ಕಾರದಿಂದ ಅನುದಾನ ಬರಬೇಕು. ಬೆಳೆ ಹಾನಿಗೆ ಕನಿಷ್ಠ ಹೆಕ್ಟೇರ್‌ಗೆ ರು. 4,500 ನೀಡಲಾಗಿದೆ.
- ಪಾಂಡುರಂಗ ನಾಯಕ, ಹಾವೇರಿ ಜಿಲ್ಲಾಧಿಕಾರಿ


-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement