ಶಿಕ್ಷಣ ವೈಚಾರಿಕತೆ ಬೆಳೆಸಲಿ: ಶಿಡ್ಲಾಪುರ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಅ. 30
ವೈಚಾರಿಕತೆ ಹಾಗೂ ಆತ್ಮಸ್ಥೈರ್ಯ ಬೆಳೆಸುವ ಸಂಸ್ಕಾರಯುತ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದ್ದರೂ ಅಂಕಾಧಾರಿತ ಶಿಕ್ಷಣದ ಒತ್ತಡದಲ್ಲಿ ಮಕ್ಕಳ ಪ್ರತಿಭೆಗೆ ಅನುಸಾರವಾದ ಶಿಕ್ಷಣ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ, ಸಾಹಿತಿ ಪ್ರೊ ಮಾರುತಿ ಶಿಡ್ಲಾಪುರ ನುಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಬಾಲಭವನ ಸೊಸೈಟಿ ಬುಧವಾರ ಆಯೋಜಿಸಿದ್ದ 'ಮಕ್ಕಳ ಕಲಾ ಉತ್ಸವ ಹಾಗೂ ಕಲಾಶ್ರೀ ಪ್ರಶಸ್ತಿ ಆಯ್ಕೆ' ಚಟುವಟಿಕೆ ಉದ್ಘಾಟಿಸಿದ ಅವರು, ಮಕ್ಕಳ ಪ್ರತಿಭೆ ಗುರುತಿಸಲು ಕಲಾ ಪ್ರದರ್ಶನದ ವೇದಿಕೆ ಒದಗಿಸಬೇಕು. ಕೇವಲ ಪಠ್ಯವೇ ಶಿಕ್ಷಣ ಎಂದು ಪರಿಗಣಿಸುವ ಈ ಕಾಲದಲ್ಲಿ ಸೃಜನಾತ್ಮಕತೆಗೆ ಒತ್ತು ಕಡಿಮೆಯಾಗಿದೆ. ನಮ್ಮ ಬುದ್ಧಿಶಕ್ತಿ, ವೈಚಾರಿಕತೆಯನ್ನು ಬೆಳೆಸುವ ಗ್ರಾಮೀಣ ಜನಪದ ಆಟಗಳನ್ನು ಪುನರುತ್ಥಾನಗೊಳಿಸಬೇಕು. ಆದರೆ ಮಕ್ಕಳನ್ನು ಬೀದಿಯ ಆಟಕ್ಕೆ ಬಿಡದೆ, ನಾಗರಿಕತೆಯ ಹೆಸರಿನಲ್ಲಿ ಮುಚ್ಚಿಡುವ, ಸಾಮಾಜಿಕ ಬದುಕಿನಿಂದ ದೂರವಿಡುವ ಕಾರಣ ಅವರಲ್ಲಿ ಆತ್ಮಸ್ಥೈರ್ಯ ಕುಗ್ಗುತ್ತಿದೆ. ಉತ್ತಮ ಅವಕಾಶಗಳನ್ನು ಒದಗಿಸಿದರೆ ಮಾತ್ರ ಮಕ್ಕಳ ಪ್ರತಿಭೆ ಪ್ರಜ್ವಲಿಸಲು ಸಾಧ್ಯ ಎಂದರು.
ಕೀಳರಿಮೆ ಸಲ್ಲದು
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ಎಸ್.ಎಫ್. ಕೆಂಗಮ್ಮನವರ, ಶೈಕ್ಷಣಿಕ ವಲಯದಲ್ಲಿ ಪ್ರತಿಭಾ ಕಾರಂಜಿಗಳು ಮಕ್ಕಳ ಸಾಂಸ್ಕೃತಿಕ ವೈಭವ ಮೆರೆದಿವೆ. ನಮ್ಮೊಳಗಿನ ಸಾಂಸ್ಕೃತಿಕ ಪ್ರಜ್ಞೆ ಜಾಗೃತಗೊಳಿಸಿವೆ. ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಯಾವುದೆ ಮಗುವಿನ ಬಗ್ಗೆ ಕೀಳರಿಮೆ ಸಲ್ಲದು. ಆದರೆ ಸದವಕಾಶ ಎಲ್ಲರಿಗೂ ಅಗತ್ಯವಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ರಾಜೇಶ್ವರಿ ಬಿ., ಶಿಲ್ಪಾ ಹೊಸಮಠ, ರಶೀದಾ ಉಪನಾಳ, ವೀರಮ್ಮ ಪಾಟೀಲ, ಸಾವಿತ್ರಿ ಗಾಂವಕರ, ಶಕುಂತಲಾ ಪಾಟೀಲ, ಶಿವಲೀಲಾ ಕ್ಯಾಡಿ, ಶಿಕ್ಷಕ ಕಲಾವಿದರಾದ ಆರ್.ಆರ್. ಗುಡಿಸಾಗರ, ಪಿ.ಜಿ. ಚಿಕ್ಕಾಂಸಿ, ಸಿ.ಎಸ್. ಹಿರೇಮಠ, ಪಿ.ಎಂ. ದಂಡೋಜಿ, ಎಸ್.ಎಫ್. ಕಠಾರಿ ಇದ್ದರು.
ವಿಜೇತರು
ಪ್ರದರ್ಶನ ಕಲೆ ವಿಭಾಗದಲ್ಲಿ ಗಣೇಶ ಬೆಳಲದವರ, ಕೂಸನೂರ (ಯೋಗಾಸನ), ಚಂದನ ಹಳೇಕೋಟಿ, ಹಾನಗಲ್ಲ (ಭರತನಾಟ್ಯ) ಮೊದಲೆರಡು ಸ್ಥಾನ ಗಳಿಸಿದರು. ಕಲಾತ್ಮಕ ಬರವಣಿಗೆಯಲ್ಲಿ ಧನುಜಾ ಬಂಕಾಪುರ, ಹಾನಗಲ್ಲ, ಶ್ರೀನಿಧಿ ಕಲ್ಲಾಪುರ; ಚಿತ್ರಕಲೆಯಲ್ಲಿ ಹಾನಗಲ್ಲ ರೋಶನಿ ಶಾಲೆಯ ಪೂಜಾ ವಿ.ಎಸ್., ನಿಟಗಿನಕೊಪ್ಪದ ತಿಪ್ಪೇಶ ನಾಯಿಡಾ; ವಿಜ್ಞಾನ ಅವಿಷ್ಕಾರ ಸ್ಪರ್ಧೆಯಲ್ಲಿ ಹಾನಗಲ್ಲಿನ ಸೂರ್ಯ ಸಿ.ವಿ., ಶಬ್ಬಾಸಖಾನ ಪಠಾಣ ಬಹುಮಾನ ಪಡೆದರು.