ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಿಥಿಲವಾಗಿದೆ ಹಳೆಹೊನ್ನತ್ತಿ ಸೂರ್ಯನಾರಾಯಣ ದೇಗುಲ

Vishwanath S
Updated On : 31 Oct 2013, 11:59 am

ಹಾವೇರಿ: 12-13ನೇ ಶತಮಾನಕ್ಕೆ ಸೇರಿದ ಕದಂಬರ ನಾಗರ ಶೈಲಿಯ, ವಿಷ್ಣುವಿನ 24 ಅವತಾರಗಳಲ್ಲಿ ಮೊದಲನೆಯದಾದ ಕೇಶವಮೂರ್ತಿಯ ಶಿಲ್ಪವಿರುವ ದೇವಸ್ಥಾನ ಸರ್ಕಾರ, ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಶಿಥಿಲಾವಸ್ಥೆ ತಲುಪಿದೆ.
ರಾಣಿಬೆನ್ನೂರು ತಾಲೂಕಿನ ಹಳೇಹೊನ್ನತ್ತಿ ಗ್ರಾಮದ (ರಾಣಿಬೆನ್ನೂರು-ಗುತ್ತಲ ರಸ್ತೆ) ಸೂರ್ಯನಾರಾಯಣ ದೇವಸ್ಥಾನದಲ್ಲಿ ಕುಸುರಿ ಕೆತ್ತನೆಯ ಕಲಾ ನೈಪುಣ್ಯ ಕಾಣಬಹುದು. ಕಪ್ಪು ಶಿಲೆಯಲ್ಲಿ ಕೆತ್ತಿರುವ, ನಿಂತ ಭಂಗಿಯ ಸೂರ್ಯನಾರಾಯಣ ವಿಗ್ರಹವಿದೆ. ಈ ಮೂರ್ತಿಶಿಲ್ಪಕ್ಕೆ ನಾಲ್ಕು ಕೈಗಳಿದ್ದು, ಬಲಗೈಯಲ್ಲಿ ಶಂಖ ಮತ್ತು ಅಭಯ ಹಸ್ತದೊಂದಿಗೆ ಪದ್ಮ, ಎಡಗೈಯಲ್ಲಿ ಚಕ್ರ ಮತ್ತು ಗದಾಯುಧಗಳಿವೆ.
ಗಳಗನಾಥ ಶಿಲ್ಪಕ್ಕೆ ಹೋಲಿಕೆ
ಶಿಲ್ಪದ ಕೆಳಗೆ ಕಾಲುಗಳ ಅಕ್ಕಪಕ್ಕದಲ್ಲಿ ಎರಡೂ ಕಡೆಗೂ ಚಾಮರಧಾರಿ ಸ್ತ್ರೀಯರ ಸುಂದರವಾದ ಚಿಕ್ಕ ಮೂರ್ತಿಗಳಿವೆ. ಈ ಶಿಲ್ಪದ ಎಡಗೈಯಲ್ಲಿ ಅಸಾಮಾನ್ಯವಾದ ಮತ್ತು ವೈಶಿಷ್ಟ್ಯಪೂರ್ಣ ಬೀಜಫಲವಿದೆ. ಕೇಶವಮೂರ್ತಿಯ ಪ್ರಭಾವಳಿಯಲ್ಲಿ ಚಿಕ್ಕದಾದ ದಶಾವತಾರ ಮೂರ್ತಿಗಳಿದ್ದು, ಕ್ರಮವಾಗಿ ಮತ್ಸ್ಯ, ಕೂರ್ಮ ಮತ್ತು ವರಾಹವತಾರಗಳು ಪ್ರಾಣಿಗಳ ರೂಪದಲ್ಲಿ, ನರಸಿಂಹ, ವಾಮನ, ಪರಶುರಾಮ, ಬಲರಾಮ, ದಶರಥರಾಮ, ಬುದ್ಧ ಮತ್ತು ಕಲಕಿಯು ಕುಳಿತ ಭಂಗಿಯಲ್ಲಿ ಕೆತ್ತಲ್ಪಟ್ಟಿದೆ. ಕೇಶವ ಮೂರ್ತಿಯ ಶಿಲ್ಪ ಗರುಡ ಪೀಠದ ಮೇಲೆ ಸಂಸ್ಥಾಪಿತವಾಗಿದೆ. ಇದೇ ಕಾಲಘಟ್ಟದ ಬಾದಾಮಿ ಚಾಲುಕ್ಯರಿಗೆ ಸೇರಿದ ಗಳಗನಾಥದಲ್ಲಿರುವ ಶಿಲ್ಪವನ್ನು ಇದು ಹೋಲುತ್ತದೆ.
ಕಾಳಜಿ ವಹಿಸಲಿ
ಇದೇ ದೇವಸ್ಥಾನದಲ್ಲಿ ಅನಂತಶಯನ ಮೂರ್ತಿಯ ಶಿಲ್ಪ, ಅನೇಕ ಚಿಕ್ಕ ಚಿಕ್ಕ ನಾಗರ ಹಾವುಗಳನ್ನು ಕೆತ್ತಿರುವ ಶಿಲ್ಪಗಳು ಇವೆ. ಪ್ರಾಂಗಣದಲ್ಲಿ ಅನೇಕ ಕಲ್ಲಿನ ಕಂಬಗಳಿದ್ದು, ಅವೂ ವಿಭಿನ್ನವಾಗಿವೆ. ಆದರೂ ಪುರಾತನ ತತ್ವ ಇಲಾಖೆ ಅಥವಾ ಸರ್ಕಾರ ಈ ದೇಗುಲದತ್ತ ಕಾಳಜಿ ವಹಿಸದ ಪರಿಣಾಮ ಅಮೂಲ್ಯ ಕುರುಹುಗಳು ನಶಿಸುವ ಹಂತ ತಲುಪಿವೆ.
ದೇವಸ್ಥಾನದಲ್ಲಿ 12-13ನೇ ಶತಮಾನಕ್ಕೆ ಸೇರಿದ ಒಂದು ಶಾಸನವಿದ್ದು, ಇಷ್ಟಾರ್ಥಗಳನ್ನು ನೀಡಲೆಂದು ವಿಷ್ಣುವನ್ನು ಸ್ತುತಿಸಿದಂತೆ ದೇವನಾಗರ ಲಿಪಿಯಲ್ಲಿದೆ. ಕಾಲಾಂತರದಲ್ಲಿ ದೇಗುಲ ಜೀರ್ಣೋದ್ಧಾರಗೊಂಡ ಕುರುಹುಗಳೂ ಗೋಚರಿಸುತ್ತಿವೆ. ಈ ದೇಗುಲವನ್ನು ರಾಜ್ಯ ಸರ್ಕಾರದ ಪುರಾತತ್ವ ಸರ್ವೇಕ್ಷಾಣಾಧಿಕಾರಿಗಳು ಜೀರ್ಣೋದ್ಧಾರ ಮಾಡಿ, ಸ್ಮಾರಕಗಳನ್ನು ರಕ್ಷಿಸಬೇಕಿದೆ.
- ಲೇಖನ: ಸಿ.ಎಂ. ವೀರಭದ್ರಯ್ಯ, ಬಳ್ಳಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement