ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

13 ಠರಾವು ರದ್ದು

Lingaraj Badiger
Updated On : 1 Nov 2013, 11:17 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಅ. 31
ಬಿಜೆಪಿ ಆಡಳಿತದಲ್ಲಿ ಅಂಗೀಕರಿಸಲಾಗಿದ್ದ ಎಲ್ಲ ಠರಾವುಗಳನ್ನು ರದ್ದುಪಡಿಸಲು ಗುರುವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಪಾರ್ಕ್ ಫೀ ವಸೂಲಾತಿ, ಕುಡಿಯುವ ನೀರಿನ ಒಂದಕ್ಕಿಂತ ಹೆಚ್ಚು ನಳ ಸಂಪರ್ಕ ಪಡೆದಿದ್ದಲ್ಲಿ ವಾಣಿಜ್ಯ ದರ ವಸೂಲಾತಿ, ಜನರಿಗೆ ಹೊರೆಯಾಗಿದ್ದ ವಿವಿಧ ಅಭಿವೃದ್ಧಿ ಕರ ವಸೂಲಿಗೆ ಹಿಂದಿನ ಬಿಜೆಪಿ ಆಡಳಿತ ಠರಾವು ಪಾಸ್ ಮಾಡಿತ್ತು. ಈಗ ಎಲ್ಲವನ್ನೂ ರದ್ದುಪಡಿಸಲು ಸಭೆ ತೀರ್ಮಾನಿಸಿದೆ.
ಮೊದಲ ಸಭೆಯಾದ ಕಾರಣ ಪೌರಾಯುಕ್ತೆ ಬಿ.ಎಂ. ಅಶ್ವಿನಿ ನಗರಸಭೆಯ ಎಲ್ಲ ಸದಸ್ಯರನ್ನು ಸ್ವಾಗತಿಸಿದರು. ಅಧ್ಯಕ್ಷೆ ಪಾರ್ವತೆವ್ವ ಹಲ್ಡಹಲ್ಡರ ಅನಾರೋಗ್ಯ ನಿಮಿತ್ತ 15 ದಿನಗಳಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಪಾಧ್ಯಕ್ಷ ಶಿವಪ್ಪ ಮಣೇಗಾರ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶಾಸಕ ಕೆ.ಬಿ. ಕೋಳಿವಾಡ, ಕಾಂಗ್ರೆಸ್, ಬಿಜೆಪಿ, ಕೆಜೆಪಿ ಹಾಗೂ ಆರ್. ಶಂಕರ್ ಅಭಿಮಾನಿಗಳ ಸಂಘದಿಂದ ನಗರಸಭೆ ಪ್ರವೇಶಿಸಿದ ಸದಸ್ಯರು ತಮ್ಮ ಪರಿಚಯ ಮಾಡಿಕೊಂಡರು.
ಪಾರ್ಕ್ ಫೀ ವಸೂಲಿ, ನೀರಿನ ನಳಕ್ಕೆ ವಾಣಿಜ್ಯ ದರ, ಅಭಿವೃದ್ಧಿ ಕರಗಳ ಕುರಿತಾಗಿ ಹಿಂದಿನ ಆಡಳಿತ ಮಂಡಳಿ ಕೈಗೊಂಡಿದ್ದ ನಿರ್ಣಯಗಳನ್ನು ರದ್ದುಪಡಿಸಲು ಕಾಂಗ್ರೆಸ್‌ನ 16 ಹಾಗೂ ಬಿಜೆಪಿಯ ಓರ್ವ ಸದಸ್ಯ ಬೆಂಬಲ ಸೂಚಿಸಿದರು.
ಸದಸ್ಯರ ವಾಗ್ವಾದ: ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಕೆಜೆಪಿ ಸದಸ್ಯ ರಾಮಣ್ಣ ಕೋಲಕಾರ, ನಾಗರಾಜ ಅಡ್ಮನಿ, ರವಿ ಮಾಂಡ್ರೆ, ಶೇಖಪ್ಪ ಹೊಸಗೌಡ್ರ ಹಾಗೂ ಆರ್. ಶಂಕರ ಅಭಿಮಾನಿ ಸಂಘದ ಸದಸ್ಯರು ಸೇರಿ 12 ಜನ ಠರಾವು ರದ್ದುಪಡಿಸಲು ವಿರೋಧ ವ್ಯಕ್ತಪಡಿಸಿದ ಕಾರಣ, ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಕಾಂಗ್ರೆಸ್ ಹಾಗೂ ಕೆಜೆಪಿ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಶಿವಪ್ಪ ಮಣೆಗಾರ, ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಅಭಿಪ್ರಾಯ ಸೂಚಿಸುವಂತೆ ತಿಳಿಸಿದರು. ಆಗ ಠರಾವು ರದ್ದುಪಡಿಸುವ ಪರವಾಗಿ 17, ವಿರುದ್ಧವಾಗಿ 12 ಮತಗಳು ಬಿದ್ದವು. ಹೀಗಾಗಿ, ಆರು ವರ್ಷಗಳ ಹಿಂದೆ ಬಿಜೆಪಿ ಆಡಳಿತ ಪಾಸ್ ಮಾಡಿದ್ದ ಎಲ್ಲ 13 ಠರಾವುರದ್ದುಪಡಿಸಲು ಸಭೆ ತೀರ್ಮಾನಿಸಿತು.
ಸರ್ವತೋಮುಖ ಅಭಿವೃದ್ಧಿ ಮೂಲಕ ರಾಣಿಬೆನ್ನೂರನ್ನು ಸ್ವಚ್ಛ ಹಾಗೂ ಸುಂದರ ನಗರವಾಗಿಸಲು ನಗರಸಭೆಯ 31 ವಾರ್ಡ್‌ಗಳಲ್ಲಿ ರಸ್ತೆ, ಬೀದಿ ದೀಪ, ಸಿಡಿ, ಸಾರ್ವಜನಿಕ ಶೌಚಾಲಯ, ಅಂಗನವಾಡಿ ಕಟ್ಟಡ, ಸಮುದಾಯ ಭವನ ಕಟ್ಟುವುದು ಸೇರಿದಂತೆ 98 ಕಾಮಗಾರಿ ಕೈಗೆತ್ತಿಕೊಳ್ಳಲು, ನಗರದ ಬೀದಿಗಳಲ್ಲಿ ಕಸ ಸಂಗ್ರಹಿಸುವುದಕ್ಕಾಗಿ ಕಸದ ಡಬ್ಬಿ, ನೀರೆತ್ತುವ ಮೋಟರ್ ಹಾಗೂ ವಿದ್ಯುದ್ದೀಪ ಖರೀದಿಸುವುದು ಸೇರಿದಂತೆ ಅಂದಾಜು ರು. 5.81 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಠರಾವು ಅಂಗೀಕರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement