ಕರಗುದರಿ ಗ್ರಾಮದ 35 ಎಕರೆಯಲ್ಲಿ ನೂತನ ವಸತಿಗ್ರಾಮ: ಶಾಸಕ ಮನೋಹರ ತಹಶೀಲ್ದಾರ ಭರವಸೆ
ಹಾನಗಲ್ಲ: ತಾಲೂಕಿನ ಕರಗುದರಿ ಗ್ರಾಮದ 35 ಎಕರೆ ಪ್ರದೇಶದಲ್ಲಿ ನೂತನ ವಸತಿ ಗ್ರಾಮ ನಿರ್ಮಿಸಿ, ಸುತ್ತಲಿನ ಗ್ರಾಮಗಳ ಸಾವಿರಕ್ಕೂ ಅಧಿಕ ವಸತಿರಹಿತ ಬಡವರಿಗೆ ಶೀಘ್ರದಲ್ಲಿ ನಿವೇಶನ ವಿತರಿಸಲಾಗುವುದು ಎಂದು ಶಾಸಕ ಮನೋಹರ ತಹಶೀಲ್ದಾರ ಹೇಳಿದರು. ಕರಗುದರಿ ಗ್ರಾಮದಲ್ಲಿ ಜೈನ ಸಮುದಾಯ ಭವನ ಉದ್ಘಾಟಿಸಿ, ಡಾ ಬಾಬು ಜಗಜೀವನರಾಮ ಭವನ ಹಾಗೂ ಮೇಲ್ಮಟ್ಟ ಜಲಾಗಾರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿ, ಸರ್ಕಾರ ಅರ್ಹರಿಗೆ ನಿವೇಶನ ಒದಗಿಸಲು ಸನ್ನದ್ಧವಾಗಿದ್ದು, ಜಾಗದ ಕೊರತೆ ಇದ್ದರೆ ಕಂದಾಯ ಇಲಾಖೆಯಿಂದ ಪಡೆಯಲು ತಿರ್ಮಾನಿಸಲಾಗಿದೆ. ಜನಸಂಖ್ಯೆ ಆಧಾರದಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು. ಹಿಂದಿನ ಸರ್ಕಾರ ಮಂಜೂರು ಮಾಡಿದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ. ಕಾಂಗ್ರೆಸ್ ಸರ್ಕಾರ ಜನರಿಗಾಗಿ ಇನ್ನೂ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದು, ಶೀಘ್ರದಲ್ಲೇ ಸಮರ್ಪಣೆಯಾಗಲಿವೆ ಎಂದು ಭರವಸೆ ನೀಡಿದರು. ಗ್ರಾಪಂ ಅಧ್ಯಕ್ಷೆ ಶೋಭಾ ಕುಮಾರ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಮಲ್ಲನಗೌಡ್ರು ವೀರನಗೌಡ್ರ, ತಾಪಂ ಸದಸ್ಯರಾದ ಸುಮಂಗಲಾ ದೊಡ್ಮನಿ, ಕಲ್ಲವೀರಪ್ಪ ಪವಾಡಿ, ಗ್ರಾಪಂ ಉಪಾಧ್ಯಕ್ಷ ಇಕ್ಬಾಲ್ ಅಹ್ಮದ್ ಡೊಳ್ಳೇಶ್ವರ, ಮುಖಂಡರಾದ ರಂಗನಗೌಡ ಪಾಟೀಲ, ದಾನಪ್ಪ ಗಂಟೇರ, ಬೊಮ್ಮನಹಳ್ಳಿಯ ಎಸ್.ಎಂ. ಪಠಾಣ, ಎ.ಎಂ. ಮುಲ್ಲಾ ಅತಿಥಿಗಳಾಗಿದ್ದರು. ತಾಪಂ ಇಒ ಡಾ ಬಸವರಾಜ ಡಿ.ಸಿ., ಎಂಜಿನಿಯರ್ ಕೆ.ಆರ್. ಮಠದ, ಸಹಾಯಕ ಎಂಜಿನಿಯರ್ ಯಶೋಧರ ಇದ್ದರು. ತಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ ಹರಿಜನ ಪ್ರಾಸ್ತಾವಿಕ ಮಾತನಾಡಿದರು. ಆರ್.ಬಿ. ಮಿಠಾಯಿಗಾರ, ಉಮೇಶ ಕರಗುದರಿ ನಿರೂಪಿಸಿದರು.