ಮೋಟೆಬೆನ್ನೂರಲ್ಲಿ ಸುಸಜ್ಜಿತ ಬಸ್ ನಿಲ್ದಾಣ: ಶಿವಣ್ಣನವರ
ಬ್ಯಾಡಗಿ: ಮೋಟೆಬೆನ್ನೂರ ಗ್ರಾಮದಲ್ಲಿ ರು. 25 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರ ನೀಲನಕ್ಷೆಗೆ ಅನುಮತಿ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಮೋಟೆಬೆನ್ನೂರ ಗ್ರಾಮದಲ್ಲಿ ಜಿಪಂ ಹಾಗೂ ತಾಪಂನ ಎಸ್ಜಿಎಸ್ವೈ ಹಣಕಾಸು ಯೋಜನೆಯಡಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳ ಸಂಕೀರ್ಣ ಉದ್ಘಾಟಿಸಿದ ಅವರು, 17 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದ ಸಮಗ್ರ ಅಭಿವೃದ್ಧಿ ಗ್ರಾಪಂಗೆ ಈಗ ಸಿಗುತ್ತಿರುವ ಅನುದಾನದಲ್ಲಿ ಸಾಧ್ಯವಾಗದ ಮಾತು. ಶಿಕ್ಷಣ, ಇತರ ಮೂಲಸೌಲಭ್ಯಗಳ ಪೂರೈಕೆಗೆ ಸಾಕಷ್ಟು ಅನುದಾನದ ಅಗತ್ಯವಿದೆ. ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ, ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳಿಸಿದೆ ಎಂದರು.
ನೀರಿನ ಘಟಕ: ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಉದ್ದೇಶವಿದೆ. ಇದಕ್ಕಾಗಿ ಯೋಗ್ಯ ಸ್ಥಳದ ಹುಡುಕಾಟದಲ್ಲಿದ್ದೇವೆ. ಸರ್ಕಾರಿ ಐಟಿಐ ಕಾಲೇಜು ಸ್ಥಾಪಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದೂ ಶಾಸಕರು ತಿಳಿಸಿದರು.
ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಹಳ್ಳಿಗಳಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು, ದುಡಿಯುವ ಕೈಗಳಿಗೆ ಉದ್ಯೋಗ ಸಿಕ್ಕಾಗ ಮಾತ್ರ ಪಟ್ಟಣಗಳಿಗೆ ವಲಸೆ ಹೋಗುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವೆಂದರು.
ಗ್ರಾಪಂ ಅಧ್ಯಕ್ಷೆ ನೀಲಮ್ಮ ಗೊರವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿಜಯ ಸವಣೂರ, ಸದಸ್ಯರಾದ ಗುಡ್ಡಪ್ಪ ಕದಂ, ಮಾಲತೇಶ ನೆಗಳೂರ, ವಿಜಯ ದಳವಾಯಿ, ಬಸವರಾಜ ದಿಡಗೂರ, ಉಮೇಶ ಬ್ಯಾಡಗಿ, ಪುಟ್ಟಪ್ಪ ಬ್ಯಾಟೆಪ್ಪನವರ, ರಾಜೀವ ಶಿಗ್ಲಿ, ವೀರಯ್ಯ ಹಿರೇಮಠ, ಗುಡಪ್ಪ ಬಾರ್ಕಿ, ಕರಬಸಮ್ಮ ಮೂಕಮ್ಮನವರ, ಶೇಕಣ್ಣ ಮೈಲಾರ, ಬಾಬಣ್ಣ ಕುಂಠೆ, ಮಂಜಣ್ಣ ಯಲಿ, ತಾಪಂ ಇಒ ಎಸ್.ಆರ್. ಪಾಟೀಲ, ಎಫ್.ಎಂ. ಮಣ್ಣಮ್ಮನವರ ಇದ್ದರು. ಪಿಡಿಒ ಎನ್.ಬಿ. ಕಜ್ಜರಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಎಂ. ಕೆರೂಡಿ ನಿರೂಪಿಸಿದರು. ನಾಗಭೂಷಣ ವಂದಿಸಿದರು.