ಇಂದು ಮುಂಡರಗಿಗೆ ಸಿಎಂ ಸಿದ್ದು
ಮುಂಡರಗಿ: ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಬಹಿರಂಗ ಪ್ರಚಾರಕ್ಕಾಗಿ ಏ. 2ರಂದು ಮುಂಡರಗಿ ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ ಹೇಳಿದರು. ಅವರು ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಏ. 2ರಂದು ಬೆಳಗ್ಗೆ 10ಕ್ಕೆ ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಜಮೀನಿನಲ್ಲಿ ಬಹಿರಂಗ ಸಭೆ ಜರುಗಲಿದೆ. ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ಡಿ.ಆರ್. ಪಾಟೀಲ ಹಾಗೂ ಕೆಪಿಸಿಸಿ ಸದಸ್ಯರೂ ಸೇರಿದಂತೆ ಅನೇಕ ಗಣ್ಯಮಾನ್ಯರು ಆಗಮಿಸಲಿದ್ದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಈ ಹಿಂದೆ ಮುಂಡರಗಿಗೆ ಮುಖ್ಯಮಂತ್ರಿ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆನ್ನುವ ಮೂಢನಂಬಿಕೆಯನ್ನು ಮುಂದಿಟ್ಟುಕೊಂಡು ಅನೇಕ ವರ್ಷಗಳಿಂದ ಯಾವೊಬ್ಬ ಮುಖ್ಯಮಂತ್ರಿಯೂ ಇಲ್ಲಿಗೆ ಬಂದಿರಲಿಲ್ಲ. ಸಿಎಂ ಸಿದ್ದರಾಮಯ್ಯವರು ಮುಖ್ಯಮಂತ್ರಿಯಾದ ಪ್ರಾರಂಭದಲ್ಲಿಯೇ ಇದೇ ರೀತಿ ಶಾಪಗ್ರಸ್ಥವಾದ ಚಾಮರಾಜ ನಗರಕ್ಕೆ ಭೇಟಿ ನೀಡಿ ಬಂದಿದ್ದರು. ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಜೀವನಾಡಿಯನ್ನು ಬಲ್ಲವರಾಗಿರುವ ಸಿಎಂ ಸಿದ್ದರಾಮಯ್ಯನವರು ಎಲ್ಲ ಮೂಢನಂಬಿಕೆ, ಕಂದಾಚಾರಗಳಿಗೆ ತಿಲಾಂಜಲಿ ಇಟ್ಟು ಮುಂಡರಗಿಗೆ ಬರುತ್ತಿದ್ದಾರೆ ಎಂದರು.
ಜನರೊಂದಿಗೆ ಕಾಂಗ್ರೆಸ್ ಚೆಲ್ಲಾಟ
ಸವಣೂರು: ಸುದೀರ್ಘ ಕಾಲ ಈ ದೇಶವನ್ನಾಳಿದ ಕಾಂಗ್ರೆಸ್ ಸಮರ್ಥವಾಗಿ ಆಡಳಿತ ನಡೆಸಲು ಎಲ್ಲ ಹಂತಗಳಲ್ಲಿ ವಿಫಲಗೊಂಡಿದೆ. ಅಭಿವೃದ್ಧಿ ಕಾರ್ಯಗಳ ಕುರಿತು ಕಿಂಚಿತ್ತೂ ಕಾಳಜಿ ಇಲ್ಲದ ಈ ಪಕ್ಷ ಜನತೆಯ ಜತೆಗೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು. ತಾಲೂಕಿನ ಯಲವಿಗಿ ಗ್ರಾಮದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಭಾನುವಾರ ಮತಯಾಚಿಸಿ ಮಾತನಾಡಿದ ಅವರು, ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳ ಪೈಕಿ ಒಂದನ್ನೂ ಕಾರ್ಯಗತಗೊಳಿಸುವಲ್ಲಿ ವಿಫಲಗೊಂಡಿದೆ. ದೇಶವನ್ನು 5 ದಶಕಗಳ ಕಾಲ ಮುನ್ನಡೆಸಿದ ಕಾಂಗ್ರೆಸ್ ಸ್ವಾತಂತ್ರ್ಯದ ಸಂದರ್ಭದಲ್ಲಿ ಇದ್ದ ಸಮಸ್ಯೆಗಳು ಇಂದಿಗೂ ಇವೆ. ಅಭಿವೃದ್ಧಿಯನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದ್ದೇ ಇದಕ್ಕೆ ಕಾರಣ ಎಂದು ಟೀಕಿಸಿದರು. ಶಿವಕುಮಾರ ಉದಾಸಿ ಅವರನ್ನು ಬಹುಮತದಿಂದ ಆಯ್ಕೆ ಮಾಡುವ ಮೂಲಕ ದೇಶದ ಧೀಮಂತ ನಾಯಕ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು. ಮಾಜಿ ಸಚಿವರಾದ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಮಾಜಿ ಶಾಸಕರಾದ ನೆಹರು ಓಲೇಕಾರ, ಶಿವರಾಜ್ ಸಜ್ಜನರ ಇತರರು ಇದ್ದರು.
ಹಾವೇರಿ ಕ್ಷೇತ್ರ: 15,57,815 ಮತದಾರರು
ಹಾವೇರಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಲ್ಲಿ 15,57,815 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಹೊಸದಾಗಿ ಸುಮಾರು 45 ಸಾವಿರ ಮತದಾರರು ಸೇರ್ಪಡೆಯಾಗಿದ್ದು, ಕ್ಷೇತ್ರದ ಚುನಾವಣಾಧಿಕಾರಿಗಳು ಅಂತಿಮ ಮತದಾರರ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ಕಳೆದ ಜ. 31ಕ್ಕೆ ಸಿದ್ಧಪಡಿಸಿದ್ದ ಮತದಾರರ ಪಟ್ಟಿಯಲ್ಲಿ ಕ್ಷೇತ್ರದ ಮತದಾರರ ಸಂಖ್ಯೆ 15 ಲಕ್ಷ 12 ಸಾವಿರ 151 ಆಗಿತ್ತು. ಈಗ ಹೊಸದಾಗಿ ಅರ್ಜಿ ಸಲ್ಲಿಸಿದವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದ್ದು, ಏ. 17ರಂದು ನಡೆಯುವ ಮತದಾನದಲ್ಲಿ ಒಟ್ಟು 15,57,815 ಜನರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಹೊಸದಾಗಿ 45,664 ಮತದಾರರು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಗದಗ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರದಲ್ಲಿ 307299 ಪುರುಷ, 2,96,944 ಮಹಿಳಾ ಹಾಗೂ 36 ಇತರೆ ಮತದಾರರು ಸೇರಿದಂತೆ ಒಟ್ಟು 6,04,279 ಮತದಾರರಿದ್ದಾರೆ. ಹಾವೇರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 4,99,040 ಪುರುಷ, 4,54,455 ಮಹಿಳಾ ಹಾಗೂ 41 ಇತರೆ ಸೇರಿದಂತೆ ಒಟ್ಟು 9,53,536 ಮತದಾರರಿದ್ದಾರೆ. ಒಟ್ಟು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 8,06,339 ಪುರುಷ, 7,51,399 ಮಹಿಳಾ ಹಾಗೂ 77 ಇತರೆ ಸೇರಿದಂತೆ ಒಟ್ಟು 15,57,815 ಮತದಾರರಿದ್ದಾರೆ.
ಕ್ಷೇತ್ರವಾರು ಮತದಾರರು: ಶಿರಹಟ್ಟಿ-99603 ಪುರುಷ, 94074 ಮಹಿಳೆ ಹಾಗೂ 5 ಇತರೆ ಸೇರಿದಂತೆ 1,93,682 ಮತದಾರರಿದ್ದಾರೆ. ಗದಗ- 201020, ರೋಣ-209577 ಮತದಾರರಿದ್ದಾರೆ. ಹಾನಗಲ್ಲ-181442, ಹಾವೇರಿ-206740, ಬ್ಯಾಡಗಿ-188259, ಹಿರೇಕೆರೂರ-167836 ಹಾಗೂ ರಾಣಿಬೆನ್ನೂರ-209259 ಮತದಾರರಿದ್ದಾರೆ.
ತಪ್ಪಿನ ಅರಿವಾಗಿದೆ: ಯಡಿಯೂರಪ್ಪ
ಗಜೇಂದ್ರಗಡ: ರಾಜ್ಯದ ಜನತೆ ನೀಡಿದ ಅಧಿಕಾರ ಸದ್ವಿನಿಯೋಗ ಮಾಡಿಕೊಳ್ಳಲು ವಿಫಲರಾದ ನಮಗೀಗ ತಪ್ಪಿನ ಅರಿವಾಗಿದೆ, ಪಶ್ಚಾತ್ತಾಪವಾಗಿದೆ. ಭವಿಷ್ಯದಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಲ್ಲರೂ ಒಗ್ಗಟ್ಟಾಗಿ ಜನಸೇವೆ ಮಾಡುತ್ತೇವೆ. ಮತದಾರ ಪ್ರಭುಗಳು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಭಾನುವಾರ ಸಂಜೆ ಇಲ್ಲಿನ ಶಿವಾಜಿ ವೃತ್ತದಲ್ಲಿ ಬಿಜೆಪಿ ಹಾವೇರಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತ ಯಾಚಿಸಿ, ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಅವೈಜ್ಞಾನಿಕವಾಗಿವೆ. ಅವು ಜನತೆಯನ್ನು ತಲುಪಿಲ್ಲ. ರಾಜ್ಯ ಸರ್ಕಾರ ಜನತೆಯ ವಿಶ್ವಾಸ ಗಳಿಸುವಲ್ಲಿ ಎಡವಿದೆ. 10 ವರ್ಷದಿಂದ ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಕೇವಲ ಭ್ರಷ್ಟಾಚಾರದಲ್ಲಿ ಮುಳಗಿದ ಪರಿಣಾಮ ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದೆ. ರುಪಾಯಿ ಮೌಲ್ಯವೂ ಕುಸಿದು, ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿತು. ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು. ಮಾಜಿ ಸಚಿವರಾದ ಬಿ. ಶ್ರೀರಾಮಲು, ಬಸವರಾಜ ಬೊಮ್ಮಾಯಿ, ಕಳಕಪ್ಪ ಬಂಡಿ ಮಾತನಾಡಿದರು. ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಬಿಜೆಪಿ ಜಿಲ್ಲಾ ಸಂಚಾಲಕ ಎಂ.ಎಸ್. ಕರಿಗೌಡರ, ಪುರಸಭೆ ಅಧ್ಯಕ್ಷೆ ಕವಿತಾ ಜಾಳಿಹಾಳ, ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ಚೆಟ್ಟರ, ಭಾಸ್ಕರ ರಾಯಬಾಗಿ, ಚಂದ್ರು ಚಳಗೇರಿ, ಮುತ್ತಣ್ಣ ಚೆಟ್ಟರ, ಸೂಗುರೇಶ ಚೋಳಿನ, ಮಹಾಂತೇಶ ಶಿಗರಿ, ಬಾಳು ಗೌಡರ ಉಪಸ್ಥಿತರಿದ್ದರು.
ಶಿವಕುಮಾರರಿಂದ ಕ್ಷೇತ್ರ ಉದಾಸೀನ
ಮುಂಡರಗಿ: 5 ವರ್ಷದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಶಿವಕುಮಾರ ಉದಾಸಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಈ ಕ್ಷೇತ್ರವನ್ನು ಉದಾಸೀನ ಮಾಡಿದ್ದಾರೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂಅಹ್ಮದ್ ಹೇಳಿದರು. ಅವರು ಭಾನುವಾರ ರಾತ್ರಿ ಮುಂಡರಗಿಯಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿಮಠ, ಅನ್ನದಾನೀಶ್ವರ ಮಠ, ಜ. ತೋಂಟದಾರ್ಯಮಠ, ಕೋಟೆ ಆಂಜನೇಯ ದೇವಸ್ಥಾನ ಹಾಗೂ ಮಸೀದಿಗೆ ಭೇಟಿ ನೀಡಿ ಆಶೀರ್ವಾದ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಾವು ಈಗಾಗಲೇ ಹಾವೇರಿ ಕ್ಷೇತ್ರದ ವ್ಯಾಪ್ತಿಗೆ ಬರುವ ರೋಣ ತಾಲೂಕಿನ ಗ್ರಾಮಗಳಿಗೆ ಹಾಗೂ ಮುಂಡರಗಿ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಮತದಾರರಿಗೆ ಮನವಿ ಮಾಡಿದ್ದೇವೆ. ಈ ಬಾರಿ ನನಗೆ ಖಂಡಿತವಾಗಿಯೂ ಆಶೀರ್ವಾದ ಮಾಡಲಿದ್ದಾರೆ. 10 ವರ್ಷಗಳ ಯುಪಿಎ ಸರ್ಕಾರದ ಸಾಧನೆ ಹಾಗೂ ರಾಜ್ಯ ಸರ್ಕಾರದ ಕೆಲಸಗಳು ನನಗೆ ಶ್ರೀರಕ್ಷೆಯಾಗಲಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ರೋಣ ಶಾಸಕ ಜಿ.ಎಸ್. ಪಾಟೀಲ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಟಿ.ಈಶ್ವರ, ಬಿ.ಎಸ್. ಮೇಟಿ, ರವೀಂದ್ರ ಉಪ್ಪಿನಬೆಟಗೇರಿ, ಧ್ರುವಕುಮಾರ ಹೊಸಮನಿ, ಕೊಟ್ರೇಶ ಅಂಗಡಿ, ಎಸ್.ಡಿ. ಮಕಾಂದಾರ, ರಾಮಣ್ಣ ಬಳ್ಳಾರಿ, ಐ.ಎಸ್. ಪಾಟೀಲ, ಮಿಥುನಗೌಡ ಪಾಟೀಲ ಉಪಸ್ಥಿತರಿದ್ದರು.