ಕಾಂಗ್ರೆಸ್ನಿಂದ ಬಡವರ ನಿರ್ಲಕ್ಷ್ಯ: ಉದಾಸಿ
ಹಿರೇಕೆರೂರು: ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಬದುಕನ್ನು ಹಸನಾಗಿಸುವಲ್ಲಿ ವಿಫಲವಾಗಿದೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.
ಅವರು ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸೇವೆಗೆ ಅವಕಾಶ ಮಾಡಿಕೊಟ್ಟ ಜನತೆಯನ್ನು ಕಡೆಗಣಿಸಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಇಲ್ಲ. ನೈಜ ಕಳಕಳಿ ಇಲ್ಲ. ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದಿಂದ ತುಂಬಿ ತುಳುಕುತ್ತಿರುವ ಈ ಪಕ್ಷ ಮತದಾರರಲ್ಲಿ ವಿಶ್ವಾಸ ಕಳೆದುಕೊಂಡಿದೆ. ಎನ್ಡಿಎ ಸರ್ಕಾರದಲ್ಲಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಯಥೇಚ್ಚವಾಗಿ ಗ್ರಾಮೀಣ ಪ್ರದೇಶಗಳನ್ನು ತಲುಪಿಸಿದ್ದಲ್ಲದೆ, 6 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗಿತ್ತು. ಸಂವಿಧಾನಬದ್ಧ ಸಂಸ್ಥೆಯೊಂದರ ಸಮೀಕ್ಷೆಯಂತೆ ಪ್ರಧಾನಿ ಮನಮೋಹನಸಿಂಗ್ ನೇತೃತ್ವದ ಸರ್ಕಾರದಲ್ಲಿ ಅಂದಾಜು ರು. 5-6 ಲಕ್ಷಕೋಟಿ ಅವ್ಯವಹಾರ ನಡೆದಿರುವುದು ಇತಿಹಾಸವಾಗಿದೆ. 78 ಸಾವಿರ ಮೆಗಾವ್ಯಾಟ್ ವಿದ್ಯುತ್ ತಯಾರಿಸಬೇಕಿತ್ತು. ಬದ್ಧತೆ ಇಲ್ಲದ ಆಡಳಿತದಿಂದಾಗಿ ಕಲ್ಲಿದ್ದಲು ಹಾಗೂ ಗ್ಯಾಸ್ನಲ್ಲಿ ವಿದ್ಯುತ್ ತಯಾರಿಕೆ ಮಾಡದ್ದರಿಂದ ರು. 42 ಸಾವಿರ ಕೋಟಿ ಹಾನಿ ಅನುಭವಿಸಲಾಗಿದೆ ಎಂದು ದೂರಿದರು. ಶಾಸಕ ಯು.ಬಿ. ಬಣಕಾರ, ತಾಲೂಕು ಬಿಜೆಪಿ ಅಧ್ಯಕ್ಷ ಎಸ್.ಆರ್. ಅಂಗಡಿ, ಜಿಪಂ ಸದಸ್ಯ ಬಸಮ್ಮ ಅಬಲೂರ, ಮುಖಂಡರಾದ ಮಹೇಂದ್ರ ಬಡಳ್ಳಿ, ಮಹೇಶ ಗುಬ್ಬಿ, ಸಂಜೀವ ಕಬ್ಬಿಣಕಂತಿಮಠ, ನಿಂಗಪ್ಪ ಚಳಗೇರಿ, ಚಂದ್ರಪ್ಪ ಗಾಳಿ, ಮಲ್ಲನಗೌಡ ಪುಟ್ಟಪ್ಪಗೌಡ್ರ, ದತ್ತಾತ್ರೇಯ ರಾಯ್ಕರ, ಸಿದ್ದು ನರೇಗೌಡ್ರ, ರವಿ ಸಿದ್ಧಪ್ಪಗೌಡ್ರ, ಚನ್ನಬಸಪ್ಪ ಬೋಗಾವಿ, ಚಂದ್ರು ಅಣ್ಣಪ್ಪನವರ, ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.