ಪ್ರಸ್ತುತ ಸನ್ನಿವೇಶಗಳ ಅರಿವು ಅಗತ್ಯ
ಹಾವೇರಿ: ವಿದ್ಯಾರ್ಥಿಗಳಲ್ಲಿ ಪ್ರಸ್ತುತ ಸನ್ನಿವೇಶಗಳ ಅರಿವು ಮತ್ತು ಜಾಗೃತಿ ಇದ್ದಾಗ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕವಾಗಿ ಬಲಿಷ್ಠರಾಗಲು ಸಾಧ್ಯ. ಈ ಕಾರಣಕ್ಕಾಗಿಯೇ ಪ್ರತಿ ವರ್ಷ ನಮ್ಮ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ವಿಶೇಷ ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ತರಬೇತಿ ಶಿಬಿರ ಏರ್ಪಡಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಕೆಎಲ್‌ಇ ಸಂಸ್ಥೆ ಹಿಂದಿನ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ 25 ದಿನಗಳ ಸಿಇಟಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಕಾಲಕ್ಕೆ ತಕ್ಕಂತೆ ನಾವುಗಳೂ ಮನೋಪ್ರಾಬಲ್ಯ ಹೆಚ್ಚಿಸಿಕೊಂಡು ಇತರ ರಾಷ್ಟ್ರಗಳಿಗೆ ಪ್ರತಿಸ್ಪರ್ಧಿಗಳಾಗಿ ಬೆಳೆಯಬೇಕಿದೆ. ಇಡೀ ಪ್ರಪಂಚ ಭಾರತವನ್ನು ತಿರುಗಿ ನೋಡುವಂತೆ ಮಾಡಬೇಕಿದೆ ಎಂದರು.
ಅಧ್ಯಕ್ಷತೆಯನ್ನು ಪ್ರೊ.ಎನ್.ವಿ. ಕಂಬಾಳಿಮಠ ವಹಿಸಿದ್ದರು. ಡಾ.ವಿ.ಡಿ. ಯಳಮಲಿ, ಪ್ರೊ.ಎಸ್.ಎನ್. ತಿಪ್ಪನಗೌಡ್ರ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನೂರಾರು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪ.ಪೂ. ಪ್ರಾಚಾರ್ಯ ಡಾ.ಸಿ. ಮಲ್ಲಣ್ಣ ಸ್ವಾಗತಿಸಿದರು. ಡಾ.ಎನ್.ಆರ್. ಬಿರಸಾಲ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಗುರುಪಾದಯ್ಯ ವೀ. ಸಾಲಿಮಠ ನಿರೂಪಿಸಿದರು. ಪ್ರೊ.ಯು.ಜಿ. ಪಟಗಾರ ವಂದಿಸಿದರು.