ಬೇಟೆಯಾಡಿದ್ದ 9 ಮೊಲ ವಶ
ಗದಗ: ತಾಲೂಕಿನ ಕಳಸಾಪುರ ಆಸುಪಾಸು ಯುಗಾದಿ ಹಬ್ಬದ ಸಂಭ್ರಮದ ನೆಪದಲ್ಲಿ ಬೇಟೆಯಾಡಿದ್ದ 9 ಮೊಲಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸಂಜೆ ವಶಪಡಿಸಿಕೊಂಡಿದ್ದಾರೆ.
ಎರಡು ಗಂಡು ಹಾಗೂ 7 ಹೆಣ್ಣು ಮೊಲಗಳನ್ನು ಬೇಟೆಯಾಡಿ ಕೊಂದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಅರಣ್ಯಾಧಿಕಾರಿಗಳು ಮೊಲಗಳ ಶವ ಪರೀಕ್ಷೆ ಬಳಿಕ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿರುವ ಪ್ರಾಣಿ ಸಂಗ್ರಹಾಲಯದ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ದಾಳಿಯಲ್ಲಿ ಅರಣ್ಯ ಅಧಿಕಾರಿ ಎಸ್.ವೈ. ಬೀಳಗಿ, ಎಂ.ಎಸ್. ನಾಗಮ್ಮನವರ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಅಂತ್ಯ ಸಂಸ್ಕಾರದ ವೇಳೆ ಜಿಲ್ಲಾ ಅರಣ್ಯ ಅಧಿಕಾರಿ ಡಿ.ಎಫ್. ಅಘೋರೆ, ಉಪ ಅರಣ್ಯ ಅಧಿಕಾರಿ ಕೆ.ಎಂ. ಗಾಮನಗಟ್ಟಿ ಹಾಜರಿದ್ದರು.