ಶುಲ್ಕ: ವಿದ್ಯಾರ್ಥಿಗಳ ಹಿತ ಕಾಪಾಡಿ
ಹಾವೇರಿ: ವೃತ್ತಿ ಶಿಕ್ಷಣ ಶುಲ್ಕ ವಿಚಾರದಲ್ಲಿ ಸರ್ಕಾರ ವಿದ್ಯಾರ್ಥಿಗಳ ಹಿತ ಕಾಯಬೇಕು ಮತ್ತು ಸಿಇಟಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ವಿದ್ಯಾರ್ಥಿಗಳು ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ 2006ರ ಪ್ರಕಾರ ಖಾಸಗಿ ವೃತ್ತಿ ಶಿಕ್ಷಣ ಕಾಲೇಜುಗಳ ಶುಲ್ಕ ನಿಗದಿಗೊಳಿಸಲು 4 ವಾರದೊಳಗಾಗಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿದೆ. ಶುಲ್ಕ ನಿಗದಿ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಶುಲ್ಕ ನಿಗದಿಗೆ ಸಂಬಂಧಪಟ್ಟಂತೆ ಕಾಯ್ದೆಯ ಸೆಕ್ಷನ್ 7ರ ಪ್ರಕಾರ ಶಿಕ್ಷಣ ಸಂಸ್ಥೆ ಇರುವ ಪ್ರದೇಶ, ಸಂಸ್ಥೆ ನೀಡುವ ಶಿಕ್ಷಣದ ಸ್ವರೂಪ, ಲಭ್ಯವಿರುವ ಮೂಲಸೌಕರ್ಯ, ಆಡಳಿತ ಮತ್ತು ನಿರ್ವಹಣೆಗೆ ಬೇಕಾಗಿರುವ ಹಣ ಹಾಗೂ ಸಂಸ್ಥೆಯ ಬೆಳವಣಿಗೆಗೆ ಬೇಕಿರುವ ಹಣವನ್ನು ಸಂಗ್ರಹಿಸಬೇಕು. ಆದರೆ, ಸರ್ಕಾರ ಶುಲ್ಕ ನಿಗದಿಯನ್ನು ಖಾಸಗಿ ಕಾಲೇಜುಗಳಿಗೆ ಬಿಟ್ಟಿದ್ದು, ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದರು.
ಹಿಂದುಳಿದ, ದಲಿತ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಗಗನ ಕುಸುಮವಾಗುತ್ತಿದೆ. ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಸರ್ಕಾರ ಕೂಡಲೇ ವಿದ್ಯಾರ್ಥಿಗಳ ಹಿತ ಕಾಪಾಡಲು ಸೂಕ್ತ ಹಾಗೂ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಮತ್ತು ಹೈಕೋರ್ಟಿಗೆ ಮನವರಿಕೆ ಮಾಡಬೇಕು. ವೃತ್ತಿ ಶಿಕ್ಷಣ ಶುಲ್ಕ ಕಡಿಮೆ ಮಾಡಬೇಕು ಮತ್ತು ಸೀಟು ಹಂಚಿಕೆ ಸರ್ಕಾರಿ ಶೇ. 75, ಖಾಸಗಿ ಶೇ. 25ರ ಅನುಪಾತ ಹಂಚಬೇಕು. ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣದಿಂದ ದೂರ ಮಾಡುವ ವೃತ್ತಿ ಶಿಕ್ಷಣ ಕಾಯ್ದೆ 2006ನ್ನು ಕೈಬಿಟ್ಟು ವೃತ್ತಿ ಶಿಕ್ಷಣ ಬಿಕ್ಕಟ್ಟಿಗೆ ಶಾಶ್ವತ ಪರಿಹಾರವಾಗಿ ಕೇಂದ್ರೀಯ ಶಾಸನವನ್ನು ಜಾರಿಗೆ ತರಬೇಕು. ಇಲ್ಲದಿದ್ದರೆ ಎಸ್ಎಫ್ಐ ರಾಜ್ಯವ್ಯಾಪಿ ತೀವ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ಎಚ್ಚರಿಸಿದರು.
ಡಿವೈಎಫ್ಐ ಮುಖಂಡ ನಿಂಗಪ್ಪ ಆರೇರ, ಸುಭಾಸ ಎಂ. ಮಾತನಾಡಿದರು, ಮಲ್ಲಿಕಾರ್ಜುನ ಹಿರೇಮಠ, ಪ್ರಸನ್ನ ಹಿರೇಮಠ, ಬಸವರಾಜ ಬಾರ್ಕಿ, ಮಹ್ಮದ ರಫೀಕ್ ನದಾಫ, ವಿಜಯ ಬಿ.ಎಸ್., ಚಂದ್ರು ಬಿ.ಎಸ್., ಅರುಣ, ಸತೀಶ್ ಭಾಗನ್ನವರ, ಮುತ್ತು ಎನ್.ಜಿ., ಸುನೀಲ ಎಸ್.ಎಂ., ಖಾದರಸಾಬ, ರಿಯಾಝ, ಅಂಕುಶ, ಸಮೀರ್, ವಿನಾಯಕ, ಮಂಜು, ನಾಗರಾಜ, ಶ್ವೇತಾ, ಶಿಲ್ಪಾ, ಸೀಮಾ, ವಾಣಿಶ್ರೀ, ನಾಗರತ್ನಾ, ಪೂಜಾ, ಶಿವಲೀಲಾ, ಕಮಲಾಕ್ಷಿ ಇತರರು ಇದ್ದರು.