ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕುಡಿವ ನೀರಿಗಾಗಿ ಕಚೇರಿಗೆ ಬೀಗ

Mainashree
Updated On : 4 Apr 2014, 10:08 am

ಬ್ಯಾಡಗಿ: 12 ದಿನಗಳಿಂದ ಕುಡಿಯುವ ನೀರು ಪೂರೈಸದಿರುವ ಗ್ರಾಪಂ ಕಾರ್ಯವೈಖರಿಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಜಡಿದು ಸುಮಾರು ಮೂರು ತಾಸುಗಳಿಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ತಾಲೂಕಿನ ಗುಂಡೇನಹಳ್ಳಿಯಲ್ಲಿ ನಡೆಯಿತು.
ಖಾಲಿ ಕೊಡಗಳೊಂದಿಗೆ ಗ್ರಾಪಂ ಕಾರ್ಯಾಲಯಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಯುಗಾದಿ ಹಬ್ಬದಂದೇ ನೀರಿಲ್ಲದೇ ಗ್ರಾಮಸ್ಥರು ಗ್ರಾಮದ ಹೊರವಲಯದಲ್ಲಿರುವ ಖಾಸಗಿ ಕೊಳವೆಬಾವಿಗಳಲ್ಲಿ ಸ್ನಾನ ಮಾಡಬೇಕಾಯಿತು. ಇದಕ್ಕೆ ಕಾರಣರಾದ ಆಡಳಿತ ಮಂಡಳಿ ಹಾಗೂ ಇನ್ನಿತರ ಸಿಬ್ಬಂದಿಗೆ ಹಿಡಿಶಾಪ ಹಾಕಿದರು, ಅದಾಗ್ಯೂ ಅಧ್ಯಕ್ಷ ರಾಜಶೇಖರ ಯತ್ನಳ್ಳಿ ಅವರಿಂದ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಕಾರ್ಯಾಲಯಕ್ಕೆ ಬೀಗ ಹಾಕಿದರಲ್ಲದೇ ಬಾಗಿಲಿಗೆ ಬೃಹತ್ ಕಲ್ಲುಗಳನ್ನಿಟ್ಟು ಪ್ರತಿಭಟನೆ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಷಣ್ಮುಕಪ್ಪ ಹುರಕಡ್ಲಿ, ಕುಡಿಯುವ ನೀರು ಪೂರೈಸುವಲ್ಲಿ ನಿರ್ಲಕ್ಷ್ಯವಾಗಲು ಕಾರಣವೇನು? 12 ದಿನಗಳಿಂದ ಗ್ರಾಮಸ್ಥರು ನೀರಿಲ್ಲದೇ ಸಾಯುತ್ತಿದ್ದಾರೆ, ಅದರ ಬದಲು ವಿಷಕೊಟ್ಟು ಬಿಡಿ ನಿಶ್ಚಿಂತೆಯಿಂದ ಮಲಗುತ್ತೇವೆ. ನೈತಿಕ ಹೊಣೆಹೊತ್ತು ಅಧ್ಯಕ್ಷರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಆಗ್ರಹಿಸಿದರು. ಮಲ್ಲೇಶಪ್ಪ ವೀರಾಪುರ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಗ್ರಾಮಕ್ಕೆ ಶಾಶ್ವತ ಪರಿಹಾರ ಸಿಗಲಿದೆ ಎಂಬುದಾಗಿ ಭರವಸೆಯಿಟ್ಟಿದ್ದ ಜನರಿಗೆ ಇದೀಗ ನಿರಾಸೆಯಾಗಿದೆ. ಪ್ಲೋರೈಡ್ ಮುಕ್ತ ನೀರು ಪೂರೈಸಬೇಕಾಗಿದ್ದ ಯೋಜನೆ ನೀರು ವಿತರಿಸದೇ ಮತ್ತಷ್ಟು ತೊಂದರೆಯಲ್ಲಿ ಸಿಲುಕುವಂತೆ ಮಾಡಿದೆ ಎಂದರು.
ಪಿಡಿಒ ಶ್ರೀವಿದ್ಯಾ ಆಕ್ರೋಶಗೊಂಡ ಗ್ರಾಮಸ್ಥರನ್ನು ಸಮಾಧಾನಪಡಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದೆರಡು ದಿನಗಳ ಹಿಂದಷ್ಟೇ ಕೆಲಸಕ್ಕೆ ಹಾಜರಾಗಿದ್ದೇನೆ. ಇನ್ನು ಮುಂದೆ ಹೀಗಾಗದಂತೆ ಕ್ರಮ ಜರುಗಿಸುವುದಾಗಿ ಮನವಿ ಮಾಡಿದರೂ ಗ್ರಾಮಸ್ಥರು ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯಲಿಲ್ಲ. ಲಕ್ಷ್ಮೀ ಜಿಂಗಾಡೆ ಮಾತನಾಡಿ, ಕೊಳವೆಬಾವಿಗಳ ಮೂಲಕ ವಿತರಿಸುವ ಬದಲು ಗ್ರಾಮದ ಎಲ್ಲರಿಗೂ ಮೇಲ್ಮಟ್ಟದ ಜಲಾಗಾರದಿಂದ ವಿತರಿಸಿ, ಇದರಿಂದ ಎಲ್ಲರೂ ಸಮನಾಗಿ ನೀರು ಪಡೆಯಲು ಸಾಧ್ಯ. ಅಲ್ಲದೇ ಉಳ್ಳವರು 1 ಎಚ್‌ಪಿ ಮೋಟರ್‌ಳನ್ನು ನೇರವಾಗಿ ನಳಗಳಿಗೆ ಜೋಡಿಸಿ ಹೆಚ್ಚಿನ ಪ್ರಮಾಣದ ನೀರು ಪಡೆಯುತ್ತಿದ್ದಾರೆ. ಈ ಕುರಿತು ದೂರು ಸಲ್ಲಿಸಿದರೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಜಿಪಂ ಎಂಜಿನಿಯರಿಂಗ್ ವಿಭಾಗದ ಅಭಿಯಂತರ ರಾಹುಲ್ ಮಾತನಾಡಿ, ಒಂದೇ ದಿನದಲ್ಲಿ ಎರಡೂ ಕೊಳವೆ ಬಾವಿಯ ಮೋಟಾರ್‌ಗಳು ಸುಟ್ಟಿದ್ದರಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ದುರಸ್ತಿ ಅಥವಾ ಪರ್ಯಾಯ ಕ್ರಮಕೈಗೊಳ್ಳಲು ಯುಗಾದಿ ರಜೆಗಳು ಅಡ್ಡಿಯಾದ ಹಿನ್ನೆಲೆಯಲ್ಲಿ ತೊಂದರೆ ಆಗಿದ್ದು, ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದರು. ಕುಮಾರ ವರೂರು, ಕರಬಸಪ್ಪ ಹಾವೇರಿ, ಈರಣ್ಣ ಬೇವಿನಮರದ, ಸಾವಿತ್ರವ್ವ ಕಾಯಕದ, ಲಕ್ಕಮ್ಮ ಡಂಬಳ, ಸುಜಾತಾ ಲಮಾಣಿ, ಗುಂಡಪ್ಪ ಡಂಬಳ, ಲಕ್ಷ್ಮೀ ಲಮಾಣಿ, ಪುಟ್ಟಪ್ಪ ಜಾವಗಲ್ಲ, ಎಸ್.ಜಿ. ಪಾಟೀಲ, ಗುಂಡಪ್ಪ ಆನವೇರಿ, ಬಸವರಾಜ ಅರಳಿಕಟ್ಟಿ, ಕರಬಸಮ್ಮ ತಳವಾರ, ಫಕ್ಕೀರಪ್ಪ ಹೊಂಬರಡಿ, ಹರಿಚಂದ್ರಪ್ಪ ಲಮಾಣಿ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement