ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 4 Apr 2014, 10:14 am

ಬಾಲಕಿ ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ
ಧಾರವಾಡ: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಲಘಟಗಿ ತಾಲೂಕಿನ ಆಸ್ತಿಕಟ್ಟಿ ಗ್ರಾಮದ ಬಸವರಾಜ ಬಡಿಗೇರ ಎಂಬ ಆರೋಪಿಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿ ಬಸವರಾಜ,  2013ರ ಏಪ್ರಿಲ್ 2ರಂದು ಆಸ್ತಿಕಟ್ಟಿ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ,  ದಂಡ ಪ್ರಕ್ರಿಯಾ ಸಂಹಿತೆ ಕಲಂ 363, 366 ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕಲಂ 6ರ ಅಡಿ ಅಪರಾಧಿಗೆ ಜೀವಾವಧಿ ಶಿಕ್ಷೆಯೊಂದಿಗೆ ರು. 50 ಸಾವಿರ ದಂಡ ವಿಧಿಸಿದೆ. ದಂಡದ ಮೊತ್ತದ ಪೈಕಿ ರು. 45 ಸಾವಿರ ಬಾಲಕಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ಅಭಿಯೋಜಕ ಮೇಘರಾಜ ಕಬಾಡಿ ವಕಾಲತು ವಹಿಸಿದ್ದರು.
ನಾಳೆ ದಶಮಾನೋತ್ಸವ
ರಾಣಿಬೆನ್ನೂರು: ನಗರದ ದೇವರಗುಡ್ಡ ರಸ್ತೆಯಲ್ಲಿರುವ ನ್ಯೂ ಎರಾ ಪಬ್ಲಿಕ್ ಸ್ಕೂಲ್‌ನ ದಶಮಾನೋತ್ಸವ ಸಮಾರಂಭವು ಏ. 5ರಂದು ನಡೆಯಲಿದೆ.  ಸಾನ್ನಿಧ್ಯವನ್ನು ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಅತಿಥಿಗಳಾಗಿ ಹಿರಿಯ ಪತ್ರಕರ್ತ ಕನ್ನಡ ಪರ ಹೋರಾಟಗಾರ ಡಾ.ಪಾಟೀಲ ಪುಟ್ಟಪ್ಪ, ಧಾರವಾಡ ಕರ್ನಾಟಕ ವಿಶ್ವ ವಿದ್ಯಾನಿಲಯದ ಕುಲಪತಿ ಎಚ್.ಬಿ. ವಾಲೀಕಾರ, ಶಾಸಕ ಕೆ.ಬಿ. ಕೋಳಿವಾಡ, ಪೆಡರಲ್ ಬ್ಯಾಂಕ್‌ನ ಎಜಿಎಂ ಜೀಕಬ್ ಪಾನಿಕ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಲಕ್ಷ್ಮಣ, ಲಯನ್ಸ್ ಸ್ಕೂಲ್ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ, ಸಣ್ಣನಾಗಪ್ಪ ಖಾಕಿ, ಪ್ರೊ. ಬಿ.ಬಿ. ನಂದ್ಯಾಲ ಆಗಮಿಸುವರು. ನ್ಯೂ ಎರಾ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಉಮೇಶ ಗುರುಲಿಂಗಪ್ಪಗೌಡ್ರ ಅಧ್ಯಕ್ಷತೆ ವಹಿಸುವರು. ದಶಮಾನೋತ್ಸವ ಕಾರ್ಯಕ್ರಮದ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶಾಲೆ ಆಡಳಿತಾಧಿಕಾರಿ ಡಾ. ಸರೋಜಾ ದೇಸಾಯಿ ತಿಳಿಸಿದ್ದಾರೆ.
ಅಧ್ಯಕ್ಷರ ಆಯ್ಕೆ
ಹಾವೇರಿ:  ಕುರುಬಗೊಂಡ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಶಾಂತಪ್ಪ ಬಶೆಟ್ಟಪ್ಪ ಬಶೆಟ್ಟಿಯವರ ಆಯ್ಕೆಯಾಗಿದ್ದಾರೆ. ಶಾಂತಪ್ಪ ಅವರ ಆಯ್ಕೆಯನ್ನು ಚುನಾವಣಾಧಿಕಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಎ.ಟಿ. ಜಯಕುಮಾರ ಘೋಷಿಸಿದ್ದಾರೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಶಾಂತಪ್ಪ ಬಶೆಟ್ಟಿಯವರ ಅವರನ್ನು ಶಾಸಕ ಬಸವರಾಜ ಶಿವಣ್ಣವರ, ಮುಖಂಡ ಸಲೀಂ ಅಹ್ಮದ್ ಇತರರು ಅಭಿನಂದಿಸಿದ್ದಾರೆ.
ಅಲ್ಲಮಪ್ರಭುಗಳ ಜಯಂತ್ಯುತ್ಸವ ಆಚರಣೆ
ಹಾವೇರಿ: ಇಲ್ಲಿಯ ಬಸವ ಬಳಗದಿಂದ ನಗರದ ಬಸವ ಭವನದಲ್ಲಿ ಶೂನ್ಯಸಿಂಹಾಸನಾದೀಶ್ವರ ಅಲ್ಲಮಪ್ರಭುಗಳ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿದ್ದಲಿಂಗೇಶ ನಾಶಿ, ಅಲ್ಲಮರ ಜೀವನ ಹಾಗೂ ಸಾಧನೆಗಳ ಬಗ್ಗೆ ತಿಳಿಸಿದರು. ಬಳಗದ ಶಿವಬಸಪ್ಪ ಮುದ್ದಿ ಹಾಗೂ ಚಂದ್ರಶೇಖರ ಸುರಳಿಹಳ್ಳಿಯವರು, ಶಿವಯೋಗಿ ಬೆನ್ನೂರ, ಶೋಭಾತಾಯಿ ಮಾಗಾವಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಾವೇರಿ ಬಸವ ಬಳಗದ 2014-15ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರನ್ನಾಗಿ ಶೋಭಾತಾಯಿ ಮಾಗಾವಿ, ಗೌರವಾಧ್ಯಕ್ಷರಾಗಿ ಚಂದ್ರಶೇಖರ ಸುರಳಿಹಳ್ಳಿ, ಕಾರ್ಯದರ್ಶಿಯಾಗಿ ಇಂದೂಧರ ಯರೇಸೀಮಿ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಹಿಂಚಿಗೇರಿ, ದಿನಕರ ಕೋರಿಶೆಟ್ಟರ, ಖಜಾಂಚಿಯಾಗಿ ಉಳಿವೆಪ್ಪ ಪಂಪಣ್ಣನವರ, ಸಂಘಟನಾ ಕಾರ್ಯದರ್ಶಿಗಳಾಗಿ ಸಿದ್ದಲಿಂಗೇಶ ಕೌದಿ, ಪ್ರವೀಣ ತುಪ್ಪದ, ಸಲಹಾ ಸಮಿತಿಯಲ್ಲಿ ಮೋಕ್ಷನಾಥ, ಮುರಿಗೆಪ್ಪ ಕಡೇಕೊಪ್ಪ, ಚನ್ನಬಸವಣ್ಣ ರೊಡ್ಡನವರ, ಪತ್ರಿ, ಸಿದ್ದಣ್ಣ ಸುಣಗಾರ ಅವರನ್ನು ಆಯ್ಕೆ ಮಾಡಲಾಯಿತು. ಮಲ್ಲಿಕಾರ್ಜುನ ಹಿಂಚಿಗೇರಿ ಸ್ವಾಗತಿಸಿದರು. ಚನ್ನಬಸವಣ್ಣ ರೊಡ್ಡನವರ ವಂದಿಸಿದರು. ಇಂದೂಧರ ಯರೇಸೀಮಿ ನಿರ್ವಹಿಸಿದರು. ಗಂಗಣ್ಣ ಮಾಸೂರ, ಶಿವಯೋಗಿ ಅಂಗಡಿ, ಚನ್ನವೀರಪ್ಪ, ಜಯಶ್ರೀ ಶಿವಪೂರ, ಸಿದ್ದುಮತಿ ನೆಲವಿಗಿ, ಮುರಿಗೆಣ್ಣ ಕೂಲಿ, ಶಾಂತಕ್ಕ ಮಡಿವಾಳರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement