ಹಾನಗಲ್ಲ: ಅಕ್ರಮ ಸಾರಾಯಿ ಪ್ಯಾಕೆಟ್ ವಶ
ಹಾನಗಲ್ಲ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ಹಲವು ಗ್ರಾಮಗಳಲ್ಲಿ ರಾತ್ರಿ ಗಸ್ತು ಕೈಗೊಂಡು, ತನಿಖೆ ನಡೆಸುತ್ತಿದ್ದ ವಿಚಕ್ಷಣಾ ದಳದ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ ಸಾರಾಯಿ ಪ್ಯಾಕೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಬುಧವಾರ ರಾತ್ರಿ ತಾಲೂಕಿನ ಶಿರಗೋಡ-ಚಿಕ್ಕಾಂಶಿ ಹೊಸೂರು ಗ್ರಾಮಗಳ ನಡುವೆ ತೆರಳುತ್ತಿದ್ದಾಗ ವ್ಯಕ್ತಿಯೊಬ್ಬ ಮೂಟೆಯೊಂದರಲ್ಲಿ ಕೊಂಡೊಯ್ಯುತ್ತಿದ್ದ ಅಕ್ರಮ ಮದ್ಯದ 154 ಟೆಟ್ರಾ ಪ್ಯಾಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸಂಶಯಾಸ್ಪದವಾಗಿ ಕಂಡುಬಂದ ವ್ಯಕ್ತಿಯನ್ನು ನಿಲ್ಲಿಸಿ ಮಾತನಾಡಿಸಿದ ಅಧಿಕಾರಿಗಳನ್ನು ಕಂಡೊಡನೆ ಹೆದರಿ ಸ್ಥಳದಲ್ಲೇ ಮೂಟೆಯನ್ನು ಬಿಟ್ಟೊಡಿದ್ದಾನೆ. 26 ಲೀಟರ್ನಷ್ಟು ಇರುವ ಈ ಮದ್ಯದ ಅಂದಾಜು ಮೌಲ್ಯ ಸುಮಾರು ರು. 6 ಸಾವಿರ ಆಗಬಹುದೆಂದು ಅಂದಾಜಿಸಲಾಗಿದೆ. ಈ ಸಾರಾಯಿ ಪ್ಯಾಕೆಟ್ಗಳನ್ನು ಸ್ಥಳೀಯ ಅಬಕಾರಿ ವಲಯ ನಿರೀಕ್ಷಕರಿಗೆ ಹಸ್ತಾಂತರಿಸಲಾಯಿತು. ನಂತರ ಅಧಿಕಾರಿಗಳು ಸಾಂವಸಗಿ, ಶ್ಯಾಡಗುಪ್ಪಿ, ಇನಾಂನೀರಲಗಿ ಹಲವು ಗ್ರಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ವಿವರಣೆ ನೀಡಿದ ತಾಲೂಕು ತಹಸೀಲ್ದಾರ್ ಎನ್.ಟಿ. ಧರ್ಮೋಜಿರಾವ್ ಹಾಗೂ ಬಿ.ವೈ. ಬಂಡಿವಡ್ಡರ, ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ರಾತ್ರಿ 10 ಗಂಟೆಯ ನಂತರ ಗ್ರಾಮಗಳಲ್ಲಿ ಗುಂಪು-ಗುಂಪಾಗಿ ತಿರುಗಾಡುವುದು, ಸಾರ್ವಜನಿಕರ ನೆಮ್ಮದಿಗೆ ಭಂಗ ತರುವುದು, ಯಾವುದೇ ಆಮಿಷ ಒಡ್ಡುವುದು, ಮದ್ಯಪಾನ ಮಾಡುವುದು, ಅಕ್ರಮವಾಗಿ ಮದ್ಯ-ಹಣ-ಇನ್ನಿತರ ವಸ್ತುಗಳನ್ನು ಸಾಗಾಟ ಮಾಡುವುದು ಅಪರಾಧವಾಗಿದೆ. ಇಂತಹ ಪ್ರಕರಣದಲ್ಲಿ ಪಾಲ್ಗೊಂಡರೆ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ತಮ್ಮ ಗ್ರಾಮಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಸಾರ್ವಜನಿಕರು ಜಾಗೃತಿ ವಹಿಸಬೇಕು. ಪ್ರಕರಣಗಳು ಕಂಡುಬಂದಲ್ಲಿ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ತಿಳಿಸಿದ್ದಾರೆ. ಈಗಾಗಲೇ ತಾಲೂಕಿನಾದ್ಯಂತ ಚುನಾವಣಾ ವಿಚಕ್ಷಣ ಜಾಗೃತ ದಳದ ತಂಡ ತಿರುಗಾಡುತ್ತಿದ್ದು, ಪರಿವೀಕ್ಷಣೆ ಕೈಗೊಂಡಿದೆ. ಕಟ್ಟುನಿಟ್ಟಾಗಿ ನೀತಿ ಸಂಹಿತೆ ಅನುಷ್ಠಾನಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.