ಅಭ್ಯರ್ಥಿಗಳಿಗೆ ಮತದಾರರ ಬಿಸಿ
ಹಾವೇರಿ: ಮತದಾನಕ್ಕೆ ಇನ್ನು 12 ದಿನಗಳಷ್ಟೇ ಬಾಕಿ ಇರುವುದರಿಂದ ಬಿಸಿಲ ತಾಪದ ಮಧ್ಯೆಯೂ ವಿವಿಧ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಇದೇ ಸಂದರ್ಭಕ್ಕಾಗಿ ಕಾದು ಕುಳಿತ ಮತದಾರರು ತಮ್ಮ ಗ್ರಾಮದ ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಇದು ಅಭ್ಯರ್ಥಿಗಳು ಹಾಗೂ ಪಕ್ಷಗಳ ಮುಖಂಡರಿಗೆ ಇರುಸುಮುರುಸು ತಂದಿದೆ.
ಮೂಲಭೂತ ಸಮಸ್ಯೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಹಾರ ಸೂಚಿಸದೆ ಬೇಸತ್ತ ಜನ ಈಗ ಮತದಾನ ಬಹಿಷ್ಕಾರದ ಅಸ್ತ್ರ ಬಳಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಮತದಾರರು ಈಗ ತಮ್ಮಲ್ಲಿಗೆ ಬರುವ ರಾಜಕೀಯ ಮುಖಂಡರಿಗೆ ಮುಖ್ಯವಾಗಿ ರಸ್ತೆ, ಕುಡಿಯುವ ನೀರು, ಸಾರಿಗೆ ಸೌಲಭ್ಯ ಒದಗಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡಲು ಅಣಿಯಾಗಿದ್ದಾರೆ. ಹಲವೆಡೆ ಮತದಾನ ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಇದು ಅಭ್ಯರ್ಥಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ.
ಕಪ್ಪುಬಟ್ಟೆ ಪ್ರದರ್ಶನ: ರಾಣಿಬೆನ್ನೂರು ತಾಲೂಕಿನ ಹುಲ್ಲತ್ತಿ ಗ್ರಾಮಸ್ಥರು ಮತ ಕೇಳಲು ಬರುವವರಿಗೆ ಕಪ್ಪುಬಟ್ಟೆ ಪ್ರದರ್ಶಿಸಲು ನಿರ್ಧರಿಸಿದ್ದಾರೆ. ತಾಲೂಕು ಕೇಂದ್ರದಿಂದ ಕೇವಲ 4 ಕಿಮೀ ದೂರವಿದ್ದರೂ ಸಾರಿಗೆ ಸೌಲಭ್ಯ ಕಲ್ಪಿಸಿಲ್ಲ ಎಂಬುದು ಇವರ ಕೋಪಕ್ಕೆ ಕಾರಣ. ಸಂವಿಧಾನಬದ್ಧ ಮತದಾನದ ಹಕ್ಕನ್ನು ನಾವು ಚಲಾಯಿಸುತ್ತೇವೆ. ಆದರೆ, ರಾಜಕೀಯ ಪಕ್ಷಗಳ ಮುಖಂಡರಿಗೆ ಕಪ್ಪು ಬಟ್ಟೆ ಪ್ರದರ್ಶಿಸುವ ಮೂಲಕ ಪ್ರತಿಭಟಿಸುತ್ತೇವೆ ಎಂದು ದೇವರಗುಡ್ಡ ಗ್ರಾಪಂ ವ್ಯಾಪ್ತಿಯ ಹುಲ್ಲತ್ತಿ ಗ್ರಾಮದ ಜಗದೀಶ ಕೆರೂಡಿ, ದ್ಯಾಮಪ್ಪ ಅಸುಂಡಿ ಹೇಳುತ್ತಾರೆ.
ನಗರದಲ್ಲಿ ನೀರಿನ ಸಮಸ್ಯೆ: ಮೂಲ ಸೌಲಭ್ಯ ಇಲ್ಲದೆ ಜನ ಬೇಸತ್ತಿದ್ದು ಕೇವಲ ಗ್ರಾಮೀಣ ಭಾಗಕ್ಕೆ ಸೀಮಿತವಾಗಿಲ್ಲ. ನಗರ ಪ್ರದೇಶದಲ್ಲೂ ಮತದಾರರು ರಾಜಕೀಯ ಪಕ್ಷಗಳಿಗೆ ತಾಕೀತು ಮಾಡಲು ಇದೇ ಸರಿಯಾದ ಸಂದರ್ಭ ಎಂದು ಅರಿತಿದ್ದಾರೆ. ಹಾವೇರಿಯಲ್ಲಿ 15 ದಿನಗಳಿಂದ ಕುಡಿವ ನೀರು ಪೂರೈಕೆಯಾಗಿಲ್ಲ. ತುಂಗಭದ್ರಾ ನದಿಯಲ್ಲಿ ನೀರಿಲ್ಲದ್ದರಿಂದ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈಗ ಜನರ ಕೈಗೆ ಸುಲಭವಾಗಿ ಸಿಗುತ್ತಿರುವವರು ಅಭ್ಯರ್ಥಿಗಳು. ಇಷ್ಟು ವರ್ಷಗಳ ಕಾಲ ಸುಳ್ಳು ಹೇಳುತ್ತಲೇ ಕಾಲ ಕಳೆದಿದ್ದೀರಿ. ವಾರಕ್ಕೊಮ್ಮೆಯೂ ಕುಡಿಯುವ ನೀರು ನೀಡಲು ಸಾಧ್ಯವಾಗಿಲ್ಲ ಎಂದ ಮೇಲೆ ನಿಮಗೆ ಮತ ಏಕೆ ಹಾಕಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಜನರಿಗೆ ಸಮಾಧಾನ ಹೇಳುವಷ್ಟರಲ್ಲಿ ಮುಖಂಡರಿಗೆ ತಾವೇ ನೀರು ಕುಡಿದ ಅನುಭವ. ಹಾವೇರಿ ಕ್ಷೇತ್ರದ ಎಲ್ಲ ಕಡೆಗಳಲ್ಲೂ ಉದ್ಭವವಾಗಿರುವ ಕುಡಿಯುವ ನೀರಿನ ಸಮಸ್ಯೆ ರಾಜಕೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ. ಜತೆಗೆ, ಬೆಳೆ ವಿಮೆ, ಹತ್ತಿ ಬೆಳೆ ಹಾನಿಯಿಂದ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸಬೇಕು ಎಂಬ ಒತ್ತಾಯ ಪ್ರಚಾರಕ್ಕೆ ಹೋದಲ್ಲೆಲ್ಲ ರೈತರಿಂದ ಕೇಳಿಬರುತ್ತಿದೆ. ನಮಗೆ ಮತ ಹಾಕಿದರೆ ನಿಮ್ಮ ಸಮಸ್ಯೆಗೆ ಸ್ಪಂದಿಸುವುದಾಗಿ ಪಕ್ಷೇತರ ಅಭ್ಯರ್ಥಿಗಳು ಹೇಳುತ್ತಿದ್ದರೂ ಮತದಾರ ಕ್ಯಾರೇ ಎನ್ನುತ್ತಿಲ್ಲ. ಒಟ್ಟಿನಲ್ಲಿ ಈ ಬಾರಿ ಮತದಾರ ಪ್ರಜ್ಞಾವಂತಿಕೆ ತೋರಿಸುತ್ತಿದ್ದು, ಮತದಾನಕ್ಕೂ ಮುನ್ನವೇ ಸಮಸ್ಯೆಗೆ ಪರಿಹಾರ ಬಯಸುತ್ತಿರುವುದು ಹೊಸ ಬೆಳವಣಿಗೆ.
-ನಾರಾಯಣ ಹೆಗಡೆ